ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಭಗವದ್ಗೀತಾ ಅಭಿಯಾನ–ಕರ್ನಾಟಕ, ಸೋಂದಾ ಸ್ವರ್ಣವಲ್ಲೀ ಮಠ ಹಾಗೂ ಸ್ವರ್ಣರಶ್ಮೀ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಾದ್ಯಂತ ಭಗವದ್ಗೀತಾ ಅಭಿಯಾನ–2025ನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನ ಸಮಿತಿಯ ಗೌರವ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ‘ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಂಕಲ್ಪದಂತೆ ರಾಜ್ಯದಲ್ಲಿ ಈ ಅಭಿಯಾನ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಎಲ್ಲಾ ಶಾಲಾ–ಕಾಲೇಜುಗಳಲ್ಲಿ ಭಗವದ್ಗೀತೆ 11ನೇ ಅಧ್ಯಾಯದ ಪಠಣ ಆರಂಭವಾಗಿದೆ’ ಎಂದು ತಿಳಿಸಿದರು.
5ನೇ ತರಗತಿಯಿಂದ ಪದವಿ ಪೂರ್ವ ತರಗತಿಗಳವರೆಗೆ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಈಗಾಗಲೇ ಶಿವಮೊಗ್ಗ ತಾಲ್ಲೂಕಿನಲ್ಲಿ 135 ಶಿಕ್ಷಣ ಸಂಸ್ಥೆಗಳಲ್ಲಿ ಅಭಿಯಾನ ಆರಂಭವಾಗಿದೆ. ಪಠಣ ಹೇಳಿಕೊಡಲು 50 ಶಿಕ್ಷಕರನ್ನು ಸಜ್ಜುಗೊಳಿಸಲಾಗಿದೆ ಎಂದರು.
ವಿಶ್ವರೂಪ ದರ್ಶನದ 11ನೇ ಅಧ್ಯಾಯದ ಎಲ್ಲಾ ಶ್ಲೋಕಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು 11ನೇ ಅಧ್ಯಾಯದ ಎಲ್ಲಾ ಶ್ಲೋಕಗಳನ್ನು ಕಂಠಪಾಠ ಮಾಡಬೇಕು. 5 ನಿಮಿಷದ ಅವಧಿಯೊಳಗೆ ನಿರ್ಣಾಯಕರು ಸೂಚಿಸುವ ಯಾವುದೇ 10 ಶ್ಲೋಕಗಳನ್ನು ಅನುಕ್ರಮವಾಗಿ ಹೇಳಬೇಕು. ಹಾಗೆಯೇ ಭಾಷಣ ಸ್ಪರ್ಧೆ ಕೂಡ ಮೂರು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗುವುದು. ತಾಲ್ಲೂಕು ಮಟ್ಟದ ಸ್ಪರ್ಧೆ ನ.22ರೊಳಗೆ, ಜಿಲ್ಲಾ ಮಟ್ಟದ ಸ್ಪರ್ಧೆ ನ.25ರೊಳಗೆ ನಡೆಯಲಿದೆ.
ರಾಜ್ಯಮಟ್ಟದ ಸ್ಪರ್ಧೆ ನ.29ರಂದು ನಡೆಯಲಿದೆ. ಅಂದು ಸಂಜೆ 9.30ಕ್ಕೆ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶಿವಮೊಗ್ಗದ ಶೃಂಗೇರಿ ಶಂಕರ ಮಠಕ್ಕೆ ಬರಲಿದೆ. ಸೆ.9ರ ಸಂಜೆ 4 ಗಂಟೆಗೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿವಿಧ ಭಜನಾ ಮಂಡಳಿ ಪ್ರಶಿಕ್ಷಕರ ಪ್ರವಚನ ಸಂಚಾಲಕರ ಸಭೆ ನಡೆಸಲಿದ್ದಾರೆ. ಸೆ.10ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಮಂಡಳಿಯ ಸಭೆ ನಡೆಯಲಿದೆ. ಸಂಜೆ 4 ಗಂಟೆಗೆ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಾಂಶುಪಾಲರ ಜೊತೆ ವರ್ಚುವಲ್ ಸಭೆ ನಡೆಯಲಿದೆ. ಸಂಜೆ 6 ಗಂಟೆಗೆ ಶಂಕರಮಠದಲ್ಲಿ ಸಭೆ ನಡೆಸಲಾಗುವುದು ಎಂದರು.
ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್, ಲಕ್ಷ್ಮೀ ನಾರಾಯಣ ಕಾಶಿ, ಮೋಹನ್ ಜಾಧವ್, ಮ.ಸ. ನಂಜುಂಡಸ್ವಾಮಿ, ಡಿ.ಎಂ. ಹೆಗಡೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.