ADVERTISEMENT

ಹಕ್ಕಿಗಳ ಹಾವಳಿ: ಭತ್ತದ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:51 IST
Last Updated 31 ಜುಲೈ 2022, 5:51 IST
ಲ್ಯಾವಿಗೆರೆ ಗ್ರಾಮದಲ್ಲಿ ನಾಟಿ ಮಾಡಿದ ಭತ್ತದ ಸಸಿಗಳನ್ನು ಹಕ್ಕಿಗಳು ತಿಂದು ನಾಶಗೊಳಿಸಿರುವುದು.
ಲ್ಯಾವಿಗೆರೆ ಗ್ರಾಮದಲ್ಲಿ ನಾಟಿ ಮಾಡಿದ ಭತ್ತದ ಸಸಿಗಳನ್ನು ಹಕ್ಕಿಗಳು ತಿಂದು ನಾಶಗೊಳಿಸಿರುವುದು.   

ತ್ಯಾಗರ್ತಿ: ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಬಾ ಹೋಬಳಿಯ ಲ್ಯಾವಿಗೆರೆ ಗ್ರಾಮದಲ್ಲಿ ಕೆರೆ ಹಕ್ಕಿ (ರಾಮ ಕೋಳಿ)ಗಳ ಹಾವಳಿಯಿಂದ 15 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿನ ಭತ್ತದ ಬೆಳೆ ಹಾನಿಯಾಗಿದೆ.

ಗ್ರಾಮದ ನೀಲಕಂಠ ಗೌಡ, ಲಂಬೋದರ, ಪ್ರಸನ್ನ, ನಟರಾಜ ಅವರಿಗೆ ಸೇರಿದ ಭತ್ತದ ಗದ್ದೆಗಳಲ್ಲಿ ಕಾಟ ಹೆಚ್ಚಾಗಿದೆ. ನಾಟಿ ಮಾಡಿದ ಗದ್ದೆಯ ಸಸಿಗಳನ್ನು ಹಕ್ಕಿಗಳು ಬೇರು ಸಮೇತ ಕಿತ್ತು ತಿನ್ನುತ್ತಿವೆ. ಅತಿವೃಷ್ಟಿಯಿಂದ ಸಂಕಷ್ಟ ಎದುರಿಸಿದ್ದ ರೈತರು ಈಗ ಹಕ್ಕಿಗಳ ಉಪಟಳದಿಂದ ಕಂಗಾಲಾಗಿದ್ದಾರೆ.

‘ಈ ಸಮಸ್ಯೆಯ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಾಗ, ಈ ಹಕ್ಕಿಗಳ ನಿಯಂತ್ರಣಕ್ಕೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ’ ಎಂದು ಗ್ರಾಮದ ರೈತ ನೀಲಕಂಠ ಗೌಡ ದೂರಿದರು.

ADVERTISEMENT

‘ಸುರಳಿ ಹುಳುಗಳು ಗದ್ದೆಯಲ್ಲಿದ್ದರೆ ಕೆರೆ ಹಕ್ಕಿಗಳ ಕಾಟ ಹೆಚ್ಚಿರುತ್ತದೆ. ಪ್ರವಾಹದಿಂದ ಗದ್ದೆಯ ಮೇಲೆ ನೀರು ಹರಿದು ಸಸಿಗಳ ಬೇರುಗಳು ಮೇಲೆ ಬಂದಾಗ ಮೃದು ಬೇರುಗಳನ್ನು ಹಕ್ಕಿಗಳು ತಿನ್ನುತ್ತವೆ. ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ರೈತರಿಗೆ ಸಹಾಯಧನ ನೀಡಲು ಅವಕಾಶವಿದೆ. ಗದ್ದೆ ಮರು ನಾಟಿ ಮಾಡುವುದಾದರೆ ಬಿತ್ತನೆ ಬೀಜವನ್ನು ಇಲಾಖೆಯಿಂದ ನೀಡಲಾಗುವುದು’ ಎಂದು ಕೃಷಿ ಅಧಿಕಾರಿ ಸಂಜೀವ್‌ಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.