ADVERTISEMENT

ಜುಲೈ 1ರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ: ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 14:32 IST
Last Updated 28 ಜೂನ್ 2021, 14:32 IST

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜುಲೈ 1ರಿಂದ ಮೂರು ದಿನಗಳು ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ವಿಶೇಷ ಅಭಿಯಾನ ಆಯೋಜಿಸಲಾಗಿದೆ.

ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಷನ್, ಸೇವಾ ಭಾರತಿ ಕರ್ನಾಟಕ, ಪಿಇಎಸ್ ಶಿವಮೊಗ್ಗ, ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜುಲೈ 3ರವರೆಗೆ ಶಿವಮೊಗ್ಗ ನಗರ ಹೊರತುಪಡಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಪಿಯು ಮತ್ತು ಪದವಿ ಕಾಲೇಜುಗಳಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 17 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ ಹಾಕಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಲ್ಲವನ್ನೂ ಸರ್ಕಾರ ಮಾಡುವುದು ಕಷ್ಟ. ಕೋವಿಡ್ ಸಮಯದಲ್ಲಿ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡಿವೆ. ಈಗ ಸೇವಾ ಭಾರತಿ ಹಾಗೂ ಪಿಇಎಸ್, ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಷನ್ ಸಹಯೋಗದಲ್ಲಿ ಅಭಿಯಾನ ನಡೆಯಲಿದೆ. ಕೇಂದ್ರ, ರಾಜ್ಯ ಸರ್ಕಾರಗಳು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ತೀರ್ಮಾನಿಸಿವೆ. ಜಿಲ್ಲೆಯಲ್ಲಿ 4.48 ಲಕ್ಷ ಜನರಿಗೆ ಪ್ರಥಮ ಡೋಸ್ ನೀಡಲಾಗಿದೆ. 88,106 ಜನರು 2ನೇ ಡೋಸ್ ನೀಡಲಾಗಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೀಡಿಯೊ ಕಾನ್ಫರೆನ್ಸ್ ಮೂಲಕ ಬೆಂಗಳೂರಿನಲ್ಲಿ ಚಾಲನೆ ನೀಡುವರು. ಪ್ರಾಯೋಜಿತ ಸಂಸ್ಥೆಯ ಎಲ್ಲರೂ ಉಪಸ್ಥಿತರಿರುವರು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಿಇಎಸ್ ಕಾಲೇಜು ಅಧಿಕಾರಿ ಆರ್.ನಾಗರಾಜ್, ಸಹ್ಯಾದ್ರಿ ನಾರಾಯಣ ಹೃದಯಾಲಯದ ಎಫ್‌ಡಿ ವರ್ಗೀಸ್, ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ, ಸೇವಾ ಭಾರತಿಯ ಡಾ.ರವಿಕಿರಣ್, ಆರ್‌ಎಸ್‌ಎಸ್‌ ಮುಖಂಡ ಯಾದವ್ ಕೃಷ್ಣ, ಕುವೆಂ‍ಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಸಂತೋಷ್ ಬಳ್ಳೆಕೆರೆ, ಮುಖಂಡರಾದ ಸುರೇಂದ್ರ, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.