ಸಾಗರ (ಶಿವಮೊಗ್ಗ ಜಿಲ್ಲೆ): ‘ಕೆಲವು ನಕಲಿ ಗಾಂಧಿಗಳು ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಶ್ರೇಷ್ಠ ಸಂವಿಧಾನವನ್ನು ತಮ್ಮ ಟೂಲ್ ಕಿಟ್ ಆಗಿ ಬಳಸಿಕೊಂಡು ವಿಚಿತ್ರವಾಗಿ ಆಡುತ್ತ ಗಾಂಧಿ, ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆರೋಪಿಸಿದರು.
ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ಸಂಸ್ಥೆ ಗುರುವಾರ ಇಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಸನ್ಮಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.
‘ಸಂವಿಧಾನ ಆಧುನಿಕ ಸ್ಮೃತಿ ಇದ್ದಂತೆ. ಮನೆಯಲ್ಲಿ ಭಗವದ್ಗೀತೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೋ ಅದೇ ರೀತಿ ಸಂವಿಧಾನವನ್ನೂ ಇಟ್ಟುಕೊಳ್ಳಬೇಕು. ಜೊತೆಗೆ ರಾಜಕೀಯ ಹಿತಾಸಕ್ತಿಗಾಗಿ ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳುವವರ ಬಗ್ಗೆ ಜಾಗೃತರಾಗಿರಬೇಕು’ ಎಂದು ಅವರು ಕಿವಿಮಾತು ಹೇಳಿದರು.
‘ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 75ಕ್ಕೂ ಹೆಚ್ಚು ಬಾರಿ ತಿದ್ದುಪಡಿ ತಂದು ಸಂವಿಧಾನವನ್ನು ವಿರೂಪಗೊಳಿಸುವ ಕೆಲಸ ಮಾಡಿದೆ. ಸಂವಿಧಾನದ ನಿಜವಾದ ಆಶಯವನ್ನು ಕಾಪಾಡುವ ಕಾಳಜಿಯನ್ನು ಸಂಘ ಪರಿವಾರ ಮತ್ತು ಬಿಜೆಪಿ ವ್ಯಕ್ತಪಡಿಸುವುದರ ಜೊತೆಗೆ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ’ ಎಂದರು.
‘ಕಾಂಗ್ರೆಸ್ ಮುಖಂಡರು ಪ್ರತಿದಿನ ಅಂಬೇಡ್ಕರ್ ಅವರ ಜಪ ಮಾಡುತ್ತಿದ್ದಾರೆ. ಆದರೆ, ಈ ಹಿಂದೆ ಸ್ವತಃ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಮರಣ ಹೊಂದಿದ ಕೆಲವೇ ತಿಂಗಳ ನಂತರ ಅವರ ಪತ್ನಿಗೆ ಸರ್ಕಾರಿ ವಸತಿ ಸೌಲಭ್ಯ ನಿರಾಕರಿಸಿದ್ದು, ಅಂಬೇಡ್ಕರ್ ಸ್ಮಾರಕ ನಿರ್ಮಿಸಲು ವಿರೋಧ ತೋರಿದ್ದು ಇದೇ ಕಾಂಗ್ರೆಸ್’ ಎಂದು ಅವರು ದೂರಿದರು.
‘ಕಾಡಿನಲ್ಲಿ ಬಂದೂಕು ಹಿಡಿದು ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ನಡೆಸಿದ ಶಕ್ತಿಗಳು ಈಗ ನಗರಕ್ಕೆ ಪ್ರವೇಶಿಸಿವೆ. ನಗರ ನಕ್ಸಲರು ಲೇಖನಿ ಹಿಡಿದು ತಮ್ಮ ವಿಚಿತ್ರ ಸಿದ್ಧಾಂತದ ಬರವಣಿಗೆ ಮೂಲಕ ಸಮಾಜವನ್ನು ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು.
‘ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ ಎಂದು ಕಾಂಗ್ರೆಸ್ ನಿರಂತರವಾಗಿ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ಆದರೆ, ಸಂವಿಧಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿರುವುದು ಬಿಜೆಪಿಯ ಹೆಗ್ಗಳಿಕೆ’ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು.
ವಿಜ್ಞಾನ ಪ್ರತಿಭಾ ಪ್ರಕಾಶನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಅಭಿನಂದನ್ ಕೋಳಿವಾಡ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ನಿವೃತ್ತ ಸಿಪಿಐ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ರೇವಪ್ಪ ಹೊಸಕೊಪ್ಪ, ಎ.ಟಿ.ನಾಗರತ್ನ, ಗಾಯತ್ರಿ ಮಲ್ಲೇಶಪ್ಪ, ರವಿ ಗೌತಮಪುರ, ವಿಕಾಸ್ ಪುತ್ತೂರು, ರೇಖಾ, ನಂದಿನಿ, ಪರಶುರಾಮ್, ಸತೀಶ್ ಕೆ, ಕೆ.ಆರ್.ಗಣೇಶ್ ಪ್ರಸಾದ್ ಹಾಜರಿದ್ದರು.
ರಾಜಕೀಯ ಹಿತಾಸಕ್ತಿಗಾಗಿ ಸಂವಿಧಾನದ ದುರ್ಬಳಕೆ ಬಿಜೆಪಿಯಿಂದ ಸಂವಿಧಾನದ ಆಶಯ ರಕ್ಷಣೆ ನಗರ ನಕ್ಸಲರಿಂದ ಸಮಾಜ ಒಡೆಯುವ ಕೆಲಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.