ADVERTISEMENT

ಶಿವಮೊಗ್ಗ: ಪಾಲಿಕೆ ಕೆಲಸಗಳಿಗೆ ಬಿಜೆಪಿ ಸದಸ್ಯರೇ ಮಧ್ಯವರ್ತಿಗಳು

ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 13:41 IST
Last Updated 6 ಜನವರಿ 2022, 13:41 IST
ಶಿವಮೊಗ್ಗ ನಗರ ಪಾಲಿಕೆ ವೈಫಲ್ಯ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ನಗರ ಪಾಲಿಕೆ ವೈಫಲ್ಯ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ನಗರ ಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ. ಆಸ್ತಿ ತೆರಿಗೆ, ಖಾತೆ ಬದಲಾವಣೆಯ ಪ್ರಕ್ರಿಯೆಯಲ್ಲಿ ಬಿಜೆಪಿಯ ಸದಸ್ಯರೇ ಮಧ್ಯವರ್ತಿಗಳಾಗಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಆರೋಪಿಸಿದರು.

ನಗರ ಪಾಲಿಕೆ ಮುಂದೆ ಗುರುವಾರ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಜನರು ಕೋವಿಡ್‌ ಸಂಕಷ್ಟದಿಂದ ಹೊರಬರಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಆಸ್ತಿ ತೆರಿಗೆ, ನೀರಿನ ಕಂದಾಯ ಹೆಚ್ಚಳ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಬಿಜೆಪಿ ಜನವಿರೋಧಿ ಆಡಳಿತ ನಡೆಸುತ್ತಿದೆ. ಅಧಿಕಾರಿಗಳ ಕೈಗೆ ಆಡಳಿತ ಒಪ್ಪಿಸಿ ಕಮಿಷನ್ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ.ನಾಗರಿಕರು ನೇರವಾಗಿ ಪಾಲಿಕೆಗೆ ಹೋದರೆ ಅಲ್ಲಿಯ ನೌಕರರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಲಂಚ ನೀಡದಿದ್ದರೆ ಕೆಲಸಗಳೇ ಆಗುವುದಿಲ್ಲ ಎಂದು ದೂರಿದರು.

ADVERTISEMENT

ಆಸ್ತಿ ತೆರಿಗೆ ಮತ್ತು ಖಾತೆ ಬದಲಾವಣೆಯ ಪ್ರಕ್ರಿಯೆಯಲ್ಲಿ ಬಿಜೆಪಿಯ ಸದಸ್ಯರು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಪ್ರಕರಣಗಳು ಹೆಚ್ಚಾಗುತ್ತಿವೆ. ರುವುದಕ್ಕೆ ಬಿಜೆಪಿ ಆಡಳಿತವೇ ಕಾರಣವಾಗಿದೆ. ಲಂಚ ನೀಡದಿದ್ದರೆ ನಾಗರೀಕರ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಪಿಮುಷ್ಠಿಯಲ್ಲಿರುವ ಪಾಲಿಕೆ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಸ್ಮಾರ್ಟ್‌ಸಿಟಿ ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿವೆ. ಕುಡಿಯುವ ನೀರು ಸರಬರಾಜು ಅವ್ಯವಸ್ಥೆಯಿಂದ ನೀರು ವ್ಯತ್ಯಯವಾಗುತ್ತಿದೆ. ಒಳಚರಂಡಿ, ಮ್ಯಾನ್‌ಹೋಲ್‌ಗಳು ಬಾಯಿ ಬಿಟ್ಟುಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ನೀತಿ-ನಿಯಮಗಳೇ ಇಲ್ಲ ಎಂದು ದೂರಿದರು.

ಆಶ್ರಯ ಯೋಜನೆ ಮನೆಗಳ ನಿರ್ಮಾಣ ನನೆಗುದ್ದಿಗೆ ಬಿದ್ದಿದೆ. ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಕೊಳಚೆ ನಿರ್ಮೂಲನ ಮಂಡಳಿಯಿಂದ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದ ಬಡವರಿಂದ ತಲಾ ₹ 75 ಸಾವಿರ ಹಣ ಕಟ್ಟಿಸಿಕೊಂಡಿದ್ದಾರೆ. 3 ವರ್ಷಗಳಾದರೂ ಹಣವೂ ಇಲ್ಲ, ಮನೆಯೂ ಇಲ್ಲ. ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.

ದೂಳಿನಿಂದ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಪಾಲಿಕೆ ಆಸ್ತಿಗಳ ಕಬಳಿಕೆ, ಒತ್ತುವರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಶುದ್ದ ನೀರಿನ ಘಟಕಗಳು ದುರಸ್ತಿ ಕಾಣದೆ ಪಾಳುಬಿದ್ದಿವೆ. ಹಸೀರಿಕರಣ ಯೋಜನೆಗಾಗಿ ಜನರ ತೆರಿಗೆ ಹಣ ಲೂಟಿಯಾಗಿದೆ. ರಾಜಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ. ಇವೆಲ್ಲ ಬಿಜೆಪಿ ಆಡಳಿತ ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಎಚ್.ಸಿ.ಯೋಗೀಶ್, ಬಿ.ಎ.ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಮೆಹಕ್‌ ಷರೀಫ್, ಮಂಜುಳಾ ಶಿವಣ್ಣ, ಮುಖಂಡರಾದ ಎಲ್.ರಾಮೇಗೌಡ, ಸಿ.ಎಸ್.ಚಂದ್ರಭೂಪಾಲ, ಇಕ್ಕೇರಿ ರಮೇಶ್, ಎಸ್.ಪಿ.ಶೇಷಾದ್ರಿ,ಸೌಗಂಧಿಕಾ, ಯು.ಶಿವಾನಂದ್, ದೀಪಕ್‌ ಸಿಂಗ್‌, ಚಂದನ್, ಸುವರ್ಣ ನಾಗರಾಜ್, ಕೆ.ರಂಗನಾಥ್,ಎಚ್.ಪಿ. ಗಿರೀಶ್, ನಾಜೀಮಾ, ಪ್ರೇಮಾ, ಎನ್.ಡಿ. ಪ್ರವೀಣ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.