ADVERTISEMENT

ಶಿವಮೊಗ್ಗ | ಒಲವ ಹಾದಿಯಲ್ಲಿ ಅಂಧ ಜೋಡಿ..

ಭದ್ರಾವತಿಯ ಡಿ.ನಾಗರತ್ನಾ, ಶಿವಮೊಗ್ಗದ ಯೋಗರಾಜ್ ವಿವಾಹ ನಾಳೆ

ವೆಂಕಟೇಶ ಜಿ.ಎಚ್.
Published 13 ಜುಲೈ 2024, 6:33 IST
Last Updated 13 ಜುಲೈ 2024, 6:33 IST
<div class="paragraphs"><p>ಭದ್ರಾವತಿಯ ಡಿ.ನಾಗರತ್ನಾ, ಶಿವಮೊಗ್ಗದ ಯೋಗರಾಜ್</p></div>

ಭದ್ರಾವತಿಯ ಡಿ.ನಾಗರತ್ನಾ, ಶಿವಮೊಗ್ಗದ ಯೋಗರಾಜ್

   

ಶಿವಮೊಗ್ಗ: ‘ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು..’

–ಬೇಂದ್ರೆ ಅಜ್ಜನ ಕವಿತೆಯ ಸಾಲುಗಳ ಬೆಳಕಿನಲ್ಲೇ ತಮ್ಮ ಬಾಳ ಪಯಣಕ್ಕೆ ಜುಲೈ 14ರಂದು ರುಜು ಹಾಕುತ್ತಿದ್ದಾರೆ ಅಂಧ ಜೋಡಿ ಭದ್ರಾವತಿಯ ಡಿ.ನಾಗರತ್ನಾ ಹಾಗೂ ಶಿವಮೊಗ್ಗದ ಯೋಗರಾಜ್.

ADVERTISEMENT

ಯೋಗರಾಜ್ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಯೂನಿಯನ್ ಬ್ಯಾಂಕ್ ಉದ್ಯೋಗಿ. ನಾಗರತ್ನಾ ಭದ್ರಾವತಿಯ ಸಿದ್ಧಾರ್ಥ ಅಂಧರ ಕೇಂದ್ರದಲ್ಲಿದ್ದುಕೊಂಡು ಅಲ್ಲಿನ ಸರ್ ಎಂ.ವಿ.ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಮುಗಿಸಿದ್ದಾರೆ. ಈಗ ಅಲ್ಲಿಯೇ ಕಂಪ್ಯೂಟರ್ ಕಲಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದಾರೆ.

ಇಬ್ಬರೂ ಶಿವಮೊಗ್ಗದ ಶಾರದಾ ದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದಾರೆ. ನಂತರ ಯೋಗರಾಜ್ ಪದವಿ ಶಿಕ್ಷಣಕ್ಕೆಂದು ಬೆಂಗಳೂರಿಗೆ ತೆರಳಿದ್ದರೆ, ನಾಗರತ್ನಾ ಭದ್ರಾವತಿಯಲ್ಲಿ ಕಲಿಕೆ ಮುಂದುವರೆಸಿದ್ದರು. ಶಾಲಾ ದಿನಗಳ ಪರಿಚಯ, ಸ್ನೇಹ ಈಗ ಪ್ರೀತಿಗೆ ತಿರುಗಿ, ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯ ಬಂಧನಕ್ಕೆ ವೇದಿಕೆ ಒದಗಿಸಿದೆ ಎಂದು ಭದ್ರಾವತಿಯ ಸಿದ್ಧಾರ್ಥ ಅಂಧರ ಶಾಲೆಯ ಮುಖ್ಯಸ್ಥ ಶಿವಬಸಪ್ಪ ಸಂತಸ ವ್ಯಕ್ತಪಡಿಸುತ್ತಾರೆ.

ಇಬ್ಬರೂ ಉಡುಪಿ ಜಿಲ್ಲೆಯವರು:

ನಾಗರತ್ನಾ ಮೂಲತಃ ಉಡುಪಿಯ ಹನೇಹಳ್ಳಿಯ ಬಡಾಕೂರಾಡಿಯ ಜ್ಯೋತಿ ಹಾಗೂ ದಿವಂಗತ ದಿನೇಶ್‌ ದಂಪತಿ ಪುತ್ರಿ. ನೃತ್ಯ ಕಲಾವಿದೆಯೂ ಆಗಿರುವ ಅವರು ಸಿದ್ದಾರ್ಥ ಅಂಧರ ಕೇಂದ್ರದ ಮೂಲಕ ರಾಜ್ಯದಾದ್ಯಂತ ನೂರಾರು ಸಂಗೀತ–ನೃತ್ಯ ಕಾರ್ಯಕ್ರಮ ನೀಡಿದ್ದಾರೆ.

ಯೋಗರಾಜ್‌ ಅವರು ಉಡುಪಿಯ ಪಡುಕೋಣೆಯ ಸೀತಾ ಹಾಗೂ ದಿವಂಗತ ರಾಮಪುತ್ರನ್ ಅವರ ಮಗ. ಪದವಿ ಮುಗಿಸಿದ ನಂತರ ಅವರು ಬ್ಯಾಂಕ್ ಉದ್ಯೋಗಕ್ಕೆ ಸೇರಿದ್ದಾರೆ.

ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಶಿವಮೊಗ್ಗದ ಗಾಂಧಿಬಜಾರ್‌ನ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವಾಸವಿ ಭವನದಲ್ಲಿ ಭಾನುವಾರ ವಿವಾಹ ಬದುಕಿಗೆ ಕಾಲಿಡಲಿದ್ದಾರೆ. ‘ಅರಿಸಿನ ಹಚ್ಚಿ ಹಾರೈಸಬನ್ನಿ, ಅಕ್ಷತೆ ಹಾಕಿ ಹರುಷ ತನ್ನಿ’ ಎಂದು ಜೋಡಿ ಕೋರಿದ್ದಾರೆ.

ಮನೆಮಗಳ ಮದುವೆ ಸಂಭ್ರಮ..

‘ಅಂಧರಾಗಿ ಹುಟ್ಟಿದ್ದೇ ಶಾಪವೆಂದು ತಿಳಿದು ಅತ್ಯಂತ ನಿಕೃಷ್ಟ ಹಾಗೂ ತಾತ್ಸಾರದಿಂದ ನಡೆಸಿಕೊಳ್ಳುವ ಸಮಾಜದಲ್ಲಿ ಓರೆಕೋರೆಗಳ ನಡುವೆಯೂ ಉತ್ತಮ ಶಿಕ್ಷಣ ತರಬೇತಿ ಪಡೆದು ಉದ್ಯೋಗಸ್ಥರಾಗಿ ಬದುಕು ಕಟ್ಟಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಆ ನಿಟ್ಟಿನಲ್ಲಿ ಇಬ್ಬರೂ ಯಶಸ್ವಿಯಾಗಿ ಹೆಜ್ಜೆ ಇಟ್ಟಿದ್ದಾರೆ. ಬೇರೆಯವರಿಗೂ ಸ್ಫೂರ್ತಿಯಾಗಿದ್ದಾರೆ. ನಮ್ಮ ಕೇಂದ್ರದಲ್ಲಿ ಮನೆಮಗಳ ಮದುವೆ ಸಂಭ್ರಮ ಮನೆಮಾಡಿದೆ’ ಎಂದು ಸಿದ್ಧಾರ್ಥ ಸಂಸ್ಥೆಯ ಶಿವಬಸ‍ಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.