ADVERTISEMENT

ನಂಜಪ್ಪ ಲೈಫ್‌ಕೇರ್: ಯುವತಿಯ ಜೀವ ಉಳಿಸಿದ ಅಪರೂಪದ ಶಸ್ತ್ರಚಿಕಿತ್ಸೆ

ತಲೆಯಲ್ಲಿ ಬಲೂನಿನಂತಹ ಊತವಿದ್ದರೆ ನಿರ್ಲಕ್ಷ್ಯ ಬೇಡ: ಡಾ.ನಿಶಿತಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:40 IST
Last Updated 19 ಜುಲೈ 2025, 6:40 IST
   

ಶಿವಮೊಗ್ಗ: ‘ತಲೆನೋವಿನಿಂದ ಬಳಲುತ್ತಿದ್ದ 21 ವರ್ಷದ ಯುವತಿಯನ್ನು ಪರೀಕ್ಷಿಸಿ ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಮಿದುಳಿನ ಎಡಭಾಗದ ಪ್ರಮುಖ ರಕ್ತನಾಳದಲ್ಲಿ ಬಲೂನ್ ತರಹದ ಊತ (ಅರಿಸಮ್) ಕಂಡುಬಂದಿತ್ತು. ಅದನ್ನು ಸಣ್ಣ ರಂಧ್ರದ ಮೂಲಕ, ಅಪರೂಪದ ಶಸ್ತ್ರಚಿಕಿತ್ಸೆಯೊಂದಿಗೆ ತೆಗೆದು ಆಕೆಯ ಜೀವ ಉಳಿಸಿದ್ದೇವೆ’ ಎಂದು ನಂಜಪ್ಪ ಲೈಫ್ ಕೇರ್‌ನ ರೇಡಿಯಾಲಜಿಸ್ಟ್ ಡಾ.ನಿಶಿತಾ ಹಾಗೂ ಅರಿವಳಿಕೆ ತಜ್ಞ ಡಾ.ಪ್ರವೀಣ್ ಕುಮಾರ್ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈದ್ಯಕೀಯ ಪರಿಭಾಷೆಯಲ್ಲಿ ‘ಡಿಸ್ಸೆಕ್ಟಿಂಗ್ ಅನ್ಯೂರಿಸಮ್’ ಎಂದು ಕರೆಯಲಾಗುವ ಈ ರೀತಿಯ ಊತವು ಗಂಭೀರ ಸಮಸ್ಯೆ ಉಂಟುಮಾಡುತ್ತದೆ. ಇದು ಯುವತಿಯ ಮೆದುಳಿನಲ್ಲಿ 9 ಮಿಲಿ ಮೀಟರ್‌ನಷ್ಟು ದೊಡ್ಡ ಗಾತ್ರದಲ್ಲಿ ಬೆಳೆದು ಅಪಾಯ ತಂದೊಡ್ಡುವ ಸಾಧ್ಯತೆ ಇತ್ತು. ಬಲೂನ್ ರೀತಿ ಊದಿರುವ ಈ ಊತವನ್ನು ಸರಿಪಡಿಸದಿದ್ದರೆ ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಜೀವಕ್ಕೆ ಎರವಾಗುತ್ತಿತ್ತು. ಇಲ್ಲವೇ ಶಾಶ್ವತ ಅಂಗವೈಕಲ್ಯಕ್ಕೆ ಕಾರಣ ಆಗುತ್ತಿತ್ತು’ ಎಂದರು.

‘ಎಂಆರ್‌ಐ ಸ್ಕ್ಯಾನ್ ರಿಪೋರ್ಟ್ ನೋಡಿದ ಬಳಿಕ ಈ ಸಮಸ್ಯೆಗೆ ತಕ್ಷಣದ ಚಿಕಿತ್ಸೆ ಅಗತ್ಯವೆಂದು ಮನದಟ್ಟಾಯಿತು. ಆದರೆ ರಕ್ತನಾಳದಲ್ಲಿರುವ ಊತದ ಆಕಾರ ಮತ್ತು ಸ್ಥಳದಿಂದಾಗಿ ತೆರೆದ ಮಿದುಳಿನ ಶಸ್ತ್ರಚಿಕಿತ್ಸೆ (ಓಪನ್ ನ್ಯೂರೋಸರ್ಜರಿ) ಸರಿಯಾದ ಆಯ್ಕೆಯಲ್ಲ ಎಂದು ತೀರ್ಮಾನಿಸಿ ‘ಫೋ ಡ್ರೈವರ್ಟರ್ ಬಳಸಿ ಪ್ರಮುಖ ರಕ್ತನಾಳದ ಪುನರ್‌ ನಿರ್ಮಾಣ’ ಎಂಬ ವಿಶೇಷ, ಸುಧಾರಿತ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು’ ಎಂದು ಹೇಳಿದರು. 

ADVERTISEMENT

‘ಈ ರೀತಿಯ ಚಿಕಿತ್ಸೆಯನ್ನು ಸುಸಜ್ಜಿತ, ಉನ್ನತ ಮತ್ತು ಆಧುನಿಕ ತಂತ್ರಜ್ಞಾನ ಒಳಗೊಂಡ ಅನುಭವಿ ನ್ಯೂರೊ ತಜ್ಞರನ್ನು ಹೊಂದಿರುವ ಆಸ್ಪತ್ರೆಯಲ್ಲಿ ಮಾತ್ರ ಮಾಡಲಾಗುತ್ತದೆ. ‘ಫೋ ಡ್ರೈವರ್ಟರ್’ ಎಂಬುದು ಒಂದು ಸಣ್ಣ, ಮೃದು ಜಾಲರಿಯ (ಮೆಶ್) ಕೊಳವೆ (ಅತ್ಯಂತ ಸೂಕ್ಷ್ಮವಾದ ಜಾಲದಂತೆ). ಇದನ್ನು ಮುಖ್ಯ ರಕ್ತನಾಳದೊಳಗೆ ಅಂದರೆ ಊತವಿರುವ ಜಾಗದ ಪಕ್ಕದಲ್ಲಿ ಇರಿಸಲಾಗುತ್ತದೆ. ಇದು ಊತದ ಕಡೆಗೆ ಸಂಚರಿಸುವ ರಕ್ತವನ್ನು ತಡೆದು ಬೇರೆ ರಕ್ತನಾಳಕ್ಕೆ ಸಂಚರಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಊತವಿರುವ ರಕ್ತನಾಳದ ಮೇಲಿನ ಒತ್ತಡ ಕಡಿಮೆ ಆಗುತ್ತದೆ’ ಎಂದರು. 

‘ಇದು ಊತವಿರುವ ರಕ್ತನಾಳಕ್ಕೆ ರಕ್ತ ಸಂಚರಿಸುವುದನ್ನು ನಿಲ್ಲಿಸಿ, ಅದು ನೈಸರ್ಗಿಕವಾಗಿ ಗುಣವಾಗಲು ಸಹಾಯ ಮಾಡಿದೆ. ಚಿಕಿತ್ಸೆಯ ನಂತರ ರೋಗಿಯು ಚೇತರಿಸಿಕೊಂಡಿದ್ದು, ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದೊಂದು ಅಪರೂಪದ ಮತ್ತು ಮಲೆನಾಡು ಭಾಗದಲ್ಲಿ ಮೊದಲ ಬಾರಿಗೆ ಮಾಡಿರುವ ಯಶಸ್ವಿ ಶಸ್ತ್ರಚಿಕಿತ್ಸೆ’ ಎಂದು ತಿಳಿಸಿದರು.

ನಂಜಪ್ಪ ಆಸ್ಪತ್ರೆಯ ಪಿಆರ್‌ಒ ತ್ರಿವೇಣಿ ಶೆಟ್ಟಿ ಹಾಜರಿದ್ದರು.

ಈ ಅಪರೂಪದ ಶಸ್ತ್ರಚಿಕಿತ್ಸೆಗೆ ₹8 ಲಕ್ಷ ಖರ್ಚಾಗುತ್ತದೆ. ಬೆಂಗಳೂರು ಸೇರಿದಂತೆ ಬೇರೆಡೆಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ನಡೆದ ಯಶಸ್ವಿ ಚಿಕಿತ್ಸೆ.
-ಡಾ.ಆಶಿತಾ, ನಂಜಪ್ಪ ಲೈಫ್ ಕೇರ್ ತಜ್ಞ ವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.