(ಶಿವಮೊಗ್ಗ): ಭದ್ರಾ ಜಲಾಶಯದ ಬಳಿ ಬಲದಂಡೆ ನಾಲೆಯನ್ನು ಒಡೆದು ನೀರು ಒಯ್ಯುವುದರಿಂದ ತಾಂತ್ರಿಕವಾಗಿ ಆಗುವ ಸಾಧಕ–ಬಾಧಕಗಳ ಬಗ್ಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಜ್ಞರಿಂದ ವರದಿ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲು ಸೋಮವಾರ ಲಕ್ಕವಳ್ಳಿ ಬಳಿಯ ಭದ್ರಾ ಯೋಜನಾ ಪ್ರದೇಶದಲ್ಲಿ (ಬಿಆರ್‌ಪಿ) ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಲಜೀವನ್ ಮಿಷನ್ ಸಮಿತಿ ನೇತೃತ್ವದಲ್ಲಿ ಮೂರು ತಾಸು ನಡೆದ ಸಭೆಯಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ತಜ್ಞರನ್ನು ಕಳುಹಿಸುವಂತೆ ಮಂಗಳವಾರವೇ (ಜೂನ್ 24) ಐಐಎಸ್‌ಸಿಗೆ ಪತ್ರ ಬರೆಯುವಂತೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಾನಂದ ಬಣಕಾರ್ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಭದ್ರಾ ಬಲದಂಡೆ ನಾಲೆ ಭಾಗದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಅಹವಾಲು ಆಲಿಸಿದ ಡಿ.ಸುಧಾಕರ್, ‘ಕುಡಿಯುವ ನೀರಿನ ಯೋಜನೆಯ ಈಗಿನ ವಿನ್ಯಾಸದ ಬಗ್ಗೆ ಐಐಎಸ್‌ಸಿ ವಿಜ್ಞಾನಿಗಳಿಂದ ಕಾಲಮಿತಿಯಲ್ಲಿ ವಿಸ್ತೃತವಾಗಿ ವರದಿ ಪಡೆಯಲಾಗುವುದು. ಯೋಜನೆಯನ್ನು ಇದೇ ವಿನ್ಯಾಸದಲ್ಲಿ ಮುಂದುವರೆಸಬೇಕೇ ಅಥವಾ ಪರ್ಯಾಯ ಅವಕಾಶಗಳನ್ನು ಪರಿಶೀಲಿಸಬೇಕೇ ಎಂಬ ಬಗ್ಗೆಯೂ ಅವರಿಂದ ಅಭಿಪ್ರಾಯ ಪಡೆಯಲಾಗುವುದು’ ಎಂದು ತಿಳಿಸಿದರು.
ಅಕ್ವಾಡೆಕ್ ನಿರ್ಮಿಸಿ:
ಈಗ ಕಾಲುವೆಯನ್ನು ಸೀಳಿರುವ ಜಾಗ ಎತ್ತರದ ಪ್ರದೇಶದಲ್ಲಿದೆ. ಅಲ್ಲಿ ನೀರು ವಿಭಜನೆಗೊಂಡರೆ ಸಹಜವಾಗಿಯೇ ಅದರ ಹರಿವಿನ ವೇಗ ಕಡಿಮೆಯಾಗುತ್ತದೆ. ಕೊನೆಯ ಭಾಗದವರೆಗೂ ನೀರು ಹರಿಯುವುದಿಲ್ಲ. ಬೆಳೆಗೆ ನೀರು ಸಿಗದೇ ರೈತರು ಈಗಲೇ ಸಂಕಷ್ಟದಲ್ಲಿದ್ದಾರೆ. ಇನ್ನಷ್ಟು ಸಮಸ್ಯೆ ಆಗಲಿದೆ ಎಂದು ಹೇಳಿದ ದಾವಣಗೆರೆ ಜಿಲ್ಲೆಯ ಪ್ರತಿನಿಧಿಗಳು, ‘ಕುಡಿಯುವ ನೀರು ಒಯ್ಯಲು ನಮ್ಮ ವಿರೋಧವಿಲ್ಲ. ಆದರೆ ಜಲಾಶಯದಿಂದ 30 ಕ್ಯುಸೆಕ್ ನೀರನ್ನು ಬಲದಂಡೆ ನಾಲೆಗೆ ಬಿಡುವ ಬದಲು ನದಿಗೆ ಬಿಟ್ಟುಕೊಂಡು ಅಕ್ವಾಡೆಟ್ ಕಟ್ಟಿ ಜಾಕ್‌ವೆಲ್ ಮಾಡಿ ಸೋಲಾರ್ ವಿದ್ಯುತ್ ಬಳಸಿ ನೀರು ಕೊಡಬಹುದು’ ಎಂದು ಸಲಹೆ ನೀಡಿದರು.
ವೃಥಾ ಅಡ್ಡಿ ಸಲ್ಲ:
ತಜ್ಞರೊಂದಿಗೆ ಚರ್ಚಿಸಿಯೇ ಈಗಿನ ವಿನ್ಯಾಸ ರೂಪಿಸಲಾಗಿದೆ. ಗುರುತ್ವಾಕರ್ಷಣ ಬಲದಿಂದ ನೀರು ಹರಿಯುವುರಿಂದ ಅದರ ವೇಗ ತಗ್ಗುವುದಿಲ್ಲ. ಮುಖ್ಯ ಕಾಲುವೆಯಿಂದ ಈಗಾಗಲೇ 15 ಬಹುಗ್ರಾಮ ಯೋಜನೆಗಳಿಗೆ ಕುಡಿಯುವ ನೀರು ಪಡೆಯಲಾಗುತ್ತಿದೆ. ಅದರಿಂದೇನೂ ಕೊನೆಯ ಭಾಗದವರೆಗೆ ನೀರಿನ ಹರಿವು ನಿಂತಿಲ್ಲ. ಭೂಮಿಯ ಗುರುತ್ವ ಬಲ ಬಳಸಿ ಖರ್ಚಿಲ್ಲದೇ ನೀರು ಪಡೆಯಬಹುದಾದ ಈ ಯೋಜನೆಗೆ ಅಡ್ಡಿಪಡಿಸುವುದು ಸಲ್ಲ ಎಂದು ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಮಂಡಿಸಿದರು.
ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯ್ತಿ ಸಿಇಒ ಎಚ್.ಎಸ್.ಕೀರ್ತನಾ, ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಜೆ.ಸೋಮಶೇಖರ್, ಕರ್ನಾಟಕ ನೀರಾವರಿ ನಿಗಮದ ಸೂಪರಿಟೆಂಡೆಂಟ್ ಎಂಜಿನಿಯರ್ ಆರ್.ರವಿಚಂದ್ರ, ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ರವಿಕುಮಾರ್, ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಮುಖ್ಯ ಎಂಜಿನಿಯರ್ ಎಜಾಜ್ ಹುಸೇನ್, ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಗೌಡ ಪಾಲ್ಗೊಂಡಿದ್ದರು.
ಚಳವಳಿಯ ಸ್ವರೂಪ ಬದಲು: ಕೆ.ಟಿ.ಗಂಗಾಧರ್
‘ಬಲದಂಡೆ ನಾಲೆಯಿಂದ ನೀರು ಒಯ್ಯುವ ನಿರ್ಧಾರ ಕೈಬಿಟ್ಟಿರುವುದಾಗಿ ಸರ್ಕಾರ ಘೋಷಣೆ ಮಾಡುವವರೆಗೂ ಹೋರಾಟ ಮುಂದುವರೆಸಲಿದ್ದೇವೆ. ಅದಕ್ಕೆ ಪೂರಕವಾಗಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ಜೂನ್ 26ರಂದು ಸಿಎಂ ಭೇಟಿ ಮಾಡಿ ಮನವರಿಕೆ ಮಾಡಲಿದ್ದೇವೆ. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲು (ಪಿಐಎಲ್) ನಿರ್ಧರಿಸಿದ್ದೇವೆ’ ಎಂದು ಸಭೆಯ ನಂತರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೆ.ಟಿ. ಗಂಗಾಧರ್ ತಿಳಿಸಿದರು. ‘ಬಲದಂಡೆ ಭಾಗದ ರೈತರು ನಿತ್ಯ ಬಿಆರ್‌ಪಿಗೆ ಬಂದು ಪ್ರತಿಭಟಿಸಲು ಆಗುವುದಿಲ್ಲ. ಹೀಗಾಗಿ ಚಳವಳಿಯ ಸ್ವರೂಪ ಬದಲಾಯಿಸಲಿದ್ದೇವೆ. ಬಲದಂಡೆ ಕಾಲುವೆ ಎಲ್ಲೆಲ್ಲಿ ಬರುತ್ತದೋ ಅಲ್ಲೆಲ್ಲ ರಸ್ತೆ ತಡೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುವ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಹೇಳಿದರು.
ಶಿವಮೊಗ್ಗ: ಭದ್ರಾ ಬಲದಂಡೆ ನಾಲೆ ಒಡೆದು ನಡೆಸುತ್ತಿರುವ ಕಾಮಗಾರಿ ಕೂಡಲೇ ಸ್ಥಗಿತಗೊಳಿಸಲು ಒತ್ತಾಯಿಸಿ ಜೂನ್ 28ರಂದು ದಾವಣಗೆರೆ ನಗರ ಬಂದ್‌ಗೆ ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಜೂನ್ 25ರಂದು ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇದಕ್ಕೂ ಮುನ್ನ ನಾಲೆ ಒಡೆದು ನೀರು ಒಯ್ಯುವ ಕಾಮಗಾರಿ ಕೈಬಿಡುವಂತೆ ಒತ್ತಾಯಿಸಿ ಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕಲು ರೇಣುಕಾಚಾರ್ಯ ನೇತೃತ್ವದಲ್ಲಿ ಹೊರಟ ರೈತರ ಗುಂಪನ್ನು ಭದ್ರಾ ಯೋಜನಾ ಪ್ರದೇಶದ ಸಿಂಗನಮನೆಯ ಸೇತುವೆ ಬಳಿ ತಡೆದು ವಶಕ್ಕೆ ಪಡೆದ ಪೊಲೀಸರು ಶಿವಮೊಗ್ಗಕ್ಕೆ ಕರೆತಂದು ನಂತರ ಬಿಡುಗಡೆ ಮಾಡಿದರು. ರೇಣುಕಾಚಾರ್ಯ ಜೊತೆ ಬಿಜೆಪಿ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್ ಮಾಜಿ ಶಾಸಕ ಬಸವರಾಜ ನಾಯ್ಕ ಬಿಜೆಪಿ ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್ ಲೋಕಿಕೆರೆ ನಾಗರಾಜ ಬಿ.ಜೆ. ಅಜಯಕುಮಾರ್ ಕೊಳೇನಹಳ್ಳಿ ಸತೀಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಸಭೆಯಿಂದ ಹೊರ ನಡೆದ ದಾವಣಗೆರೆ ಪ್ರತಿನಿಧಿಗಳು..
‘ಐಐಎಸ್‌ಸಿಯಿಂದ ವರದಿ ಪಡೆಯುವುದಕ್ಕೆ ನಮ್ಮ ಸಹಮತ ಇದೆ. ಆದರೆ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಬಲದಂಡೆ ನಾಲೆಯಿಂದ ನೀರು ಒಯ್ಯಲು ಬಿಆರ್‌ಪಿಯಲ್ಲಿ ಈಗ ನಡೆಯುತ್ತಿರುವ ಕಾಮಗಾರಿ ನಿಲ್ಲಿಸಬೇಕು’ ಎಂದು ದಾವಣಗೆರೆ ಜಿಲ್ಲೆಯ ರೈತರನ್ನು ಪ್ರತಿನಿಧಿಸಿದ್ದ ಶಾಸಕರಾದ ಹರಿಹರದ ಬಿ.ಪಿ.ಹರೀಶ್ ಜಗಳೂರಿನ ಬಿ.ದೇವೇಂದ್ರಪ್ಪ ಮಾಯಕೊಂಡದ ಕೆ.ಎಸ್. ಬಸವಂತಪ್ಪ ಹಾಗೂ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ರಾಜ್ಯ ರೈತ ಸಂಘ ಹಸಿರುಸೇನೆಯ ಅಧ್ಯಕ್ಷ ಕೆ.ಟಿ.ಗಂಗಾಧರ್ ಒತ್ತಾಯಿಸಿದರು. ಅದಕ್ಕೆ ಸಭೆಯಲ್ಲಿ ಸಮ್ಮತಿ ಸಿಗದ ಕಾರಣ ಆಕ್ರೋಶಗೊಂಡು ಎಲ್ಲರೂ ಸಭೆಯಿಂದ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.