ADVERTISEMENT

ಬಿಎಸ್‌ವೈ ಸಾಮಾಜಿಕ ಬದಲಾವಣೆಯ ಹರಿಕಾರ: ಬೊಮ್ಮಾಯಿ

ಉಡುತಡಿಯಲ್ಲಿ ಅಕ್ಕಮಹಾದೇವಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಬೊಮ್ಮಾಯಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 5:27 IST
Last Updated 18 ಮಾರ್ಚ್ 2023, 5:27 IST
ಉಡುತಡಿಯಲ್ಲಿ ಶುಕ್ರವಾರ ಅಕ್ಕಮಹಾದೇವಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಬಿ.ಎಸ್‌. ಯಡಿಯೂರಪ್ಪ, ಗೋವಿಂದ ಕಾರಜೋಳ, ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಇದ್ದರು (ಎಡಚಿತ್ರ). ಉಡುತಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ. – ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ಉಡುತಡಿಯಲ್ಲಿ ಶುಕ್ರವಾರ ಅಕ್ಕಮಹಾದೇವಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಬಿ.ಎಸ್‌. ಯಡಿಯೂರಪ್ಪ, ಗೋವಿಂದ ಕಾರಜೋಳ, ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಇದ್ದರು (ಎಡಚಿತ್ರ). ಉಡುತಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ. – ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್   

ಉಡುತಡಿ (ಶಿವಮೊಗ್ಗ): ವಿದ್ಯಾರ್ಥಿಗಳಿಗೆ ಸೈಕಲ್, ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಟ್ಟು ದೊಡ್ಡ ಸಾಮಾಜಿಕ ಬದಲಾವಣೆ ತಂದುಕೊಟ್ಟ ಮಹಾನ್ ನಾಯಕ ಯಡಿಯೂರಪ್ಪ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಶುಕ್ರವಾರ ಶಿವಶರಣೆ ಅಕ್ಕಮಹಾದೇವಿಯ 51 ಅಡಿಯ ಪುತ್ಥಳಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ’ಕಾಗಿನೆಲೆ ಅಭಿವೃದ್ಧಿಗೆ ₹45 ಕೋಟಿ, ಬಾಡಕ್ಕೆ
₹15 ಕೋಟಿ ಕೊಟ್ಟಿರುವ ಯಡಿಯೂರಪ್ಪ ಹೀಗೆ ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ಯಾರ ಬಗ್ಗೆಯೂ ಅವರಿಗೆ ದ್ವೇಷವಿಲ್ಲ. ಶಿಕಾರಿಪುರ ಪುಣ್ಯಭೂಮಿ ಶರಣ ಕುಲಕ್ಕೆ ಜನ್ಮಕೊಟ್ಟ ಅದ್ಭುತ ಶಕ್ತಿ ಈ ಮಣ್ಣಿನಲ್ಲಿದೆ. ಶರಣರ ವಿಚಾರವನ್ನು ಮನೆ ಮನೆಗೆ ಮುಟ್ಟಿಸಿ ಎಲ್ಲ ಕಾಯಕ ಸಮೂಹಗಳ ಜಾಗೃತಿ ಮೂಡಿಸುವ ಕೆಲಸ ನಡೆದಿದೆ ಎಂದು ಹೇಳಿದರು.

ಶಿವಶರಣರ ನಾಡು ಶಿಕಾರಿಪುರ. ಇದು ನನಗೆ ಕರ್ಮ, ಧರ್ಮ ಭೂಮಿ. ಪೂರ್ವ ಜನ್ಮದ ಪುಣ್ಯದ ಫಲವಾಗಿ ಇಲ್ಲಿ ಜನಿಸಿದ್ದೇನೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.

ADVERTISEMENT

ನಾಡಿನುದ್ದಗಲಕ್ಕೂ ಸಂಚರಿಸಿ ಮಠ-ಮಂದಿರಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಕೂಡ ಟೊಂಕ ಕಟ್ಟಿದ್ದಾರೆ ಎಂದರು.

‘ನನಗೆ ಈಗ 80 ವರ್ಷ ಪೂರ್ಣಗೊಂಡಿದೆ. ಹಾಗೆಂದು ರಾಜಕೀಯದಿಂದ ನಿವೃತ್ತಿ ಆಗೊಲ್ಲ. ಆಯಾಸ ಆಗೊಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದರು. ಯಡಿಯೂರಪ್ಪ
ರಾಜೀನಾಮೆ ಕೊಟ್ಟರು ಎಂಬ ಟೀಕೆ ಟಿಪ್ಪಣಿ ವಿರೋಧ ಪಕ್ಷದವರು ಮಾಡುತ್ತಾರೆ ಅದು ಸ್ವಾಭಾವಿಕ. ಯಾವುದಕ್ಕೂ ಈಗ ಉತ್ತರ ಕೊಡೊಲ್ಲ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ಉತ್ತರ ನೀಡುವೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಶರಣರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ನಾವೆಲ್ಲರೂ ಮತ್ತೆ ಕಲ್ಯಾಣಕ್ಕೆ ಹೋಗಬೇಕಿದೆ. ಇಲ್ಲಿ ನಿರ್ಮಿಸಿರುವ ಅಕ್ಕನ ಮನೆ ಅತ್ಯಂತ ಅರ್ಥಪೂರ್ಣವಾಗಿದೆ. ಇತಿಹಾಸ ಮರುಕಳಿಸುತ್ತಿದೆ. ಯಡಿಯೂರಪ್ಪ ಇತಿಹಾಸ ಅರಿತು ಮರು ಸೃಷ್ಟಿಸಿದ್ದಾರೆ. ಇದೊಂದು ಅಪೂರ್ವ ಕನಸು ಎಂದು ಬಣ್ಣಿಸಿದರು.

ಅಕ್ಕಮಹಾದೇವಿ ಹೆಸರಿನಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿಯೊಂದನ್ನು ಆರಂಭಿಸಿ ಅದನ್ನು ಉಡುತಡಿಯಲ್ಲಿಯೇ ಪ್ರದಾನ ಮಾಡಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

ಶಾಸಕರಾದ ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯ ಉಗ್ರಾಣ
ನಿಗಮದ ಅಧ್ಯಕ್ಷ ಎಚ್.ಟಿ.ಬಳಿಗಾರ, ಶಿಕಾರಿಪುರ ಪುರಸಭೆ ಅಧ್ಯಕ್ಷೆ ರೇಖಾಬಾಯಿ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ತಕ್ಷ ರುದ್ರೇಶ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಯಡಿಯೂರಪ್ಪ ಕಾಮಧೇನು, ಬೊಮ್ಮಾಯಿ ಸುರಭಿ!

ಶಿಕಾರಿಪುರ ತಾಲ್ಲೂಕಿಗೆ ಯಡಿಯೂರಪ್ಪ ಕಾಮಧೇನು ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದರ ಕರು ಸುರಭಿ ಇದ್ದಂತೆ. ಶಿಕಾರಿಪುರಕ್ಕೆ ಸಂಬಂಧಿಸಿದ ಎಲ್ಲ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಬಣ್ಣಿಸಿದರು.

ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಶುಕ್ರವಾರ ಶರಣೆ ಅಕ್ಕಮಹಾದೇವಿಯ 51 ಅಡಿಯ ಪುತ್ಥಳಿ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ತಂದೆಯವರ (ಬಿ.ಎಸ್.ಯಡಿಯೂರಪ್ಪ) ತಪಸ್ಸಿನ ಫಲವಾಗಿ ಇಡೀ ಶಿಕಾರಿಪುರ ತಾಲ್ಲೂಕಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಭಾರತದ ಬೆಳಕು ಶಿಕಾರಿಪುರ ತಾಲ್ಲೂಕು ಎಂದು ಬಣ್ಣಿಸಿದರು.

ಶರಣರ ಇತಿಹಾಸದ ಪುಟವನ್ನು ಇಂದಿನ ಪೀಳಿಗೆಗೆ ತೆರೆದಿಡುವ ಕಾರ್ಯ ಅಕ್ಕಮಹಾದೇವಿ ಪುತ್ಥಳಿ ನಿರ್ಮಾಣ ಎಂದು ಹೇಳಿದರು.

ನೀರಾವರಿ ವ್ಯವಸ್ಥೆ: ₹ 75 ಸಾವಿರ ಕೋಟಿ

‘ನಮ್ಮನ್ನು ಬೆಳೆಸಿದವರು ಯಡಿಯೂರಪ್ಪನವರು. 50 ವರ್ಷಗಳ ಕಾಲ ಈ ನಾಡಿನುದ್ದಕ್ಕೂ ಹೋರಾಟ ಮಾಡಿ ರೈತರು, ನೊಂದವರಿಗೆ, ದುಡಿಯುವ ವರ್ಗಕ್ಕಾಗಿ, ಕಾಯಕ ಜೀವಿಗಳಿಗೆ ತಮ್ಮದೇ ರೀತಿ ಸೇವೆ ಮಾಡಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಶ್ಲಾಘಿಸಿದರು.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇಬ್ಬರೂ ಮುಖ್ಯಮಂತ್ರಿಗಳಾಗಿ ತಮ್ಮ ಅವಧಿಯಲ್ಲಿ ₹75 ಸಾವಿರ ಕೋಟಿ ಕೊಟ್ಟು 4 ಲಕ್ಷ ಎಕರೆಗೆ ನೀರಾವರಿ ಕಲ್ಪಿಸಿ ರೈತರ ಬದುಕು ಹಸನಾಗಿಸಿದ್ದಾರೆ ಎಂದರು.

ಇತಿಹಾಸದಲ್ಲಿ ಹೊಸ ಸಮಾಜವನ್ನೇ ಸೃಷ್ಟಿಸಿದ್ದು 12ನೇ ಶತಮಾನ. ವಿಶ್ವಗುರು ಬಸವಣ್ಣ, ಅಲ್ಲಮಪ್ರಭು ದೇವರ ನೇತೃತ್ವದಲ್ಲಿ ಬಸವ ಧರ್ಮವೆಂಬ ಲಿಂಗಾಯತ ಧರ್ಮದ ಮೂಲಕ ಹೊಸ ವ್ಯವಸ್ಥೆ ಹುಟ್ಟುಹಾಕಿದರು ಎಂದು ಹೇಳಿದರು.

ಇಡೀ ಪ್ರಪಂಚಕ್ಕೆ ಮಾದರಿಯಾದ ಈ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಅದಕ್ಕಿಂತ ಶ್ರೇಷ್ಠವಾದದ್ದು ಜೀವನದಲ್ಲಿ ಮತ್ತೇನು ಇರಲು ಸಾಧ್ಯವಿಲ್ಲ. ಶರಣರ ಆಶಯ ಈಡೇರಿಕೆಗೆ ಈಗ ಕಾಲ ಸಮೀಪಿಸಿದೆ ಎಂಬುದು ಇಲ್ಲಿ ಸೇರಿರುವ ಮಹಿಳೆಯರನ್ನು ನೋಡಿದರೆ ಗೊತ್ತಾಗುತ್ತದೆ ಎಂದರು.

ವಿದ್ಯುತ್ ಚಾಲಿತ ವಾಹನದಲ್ಲಿ ಬಂದ ನಾಯಕರು

ಅಕ್ಕನ ಮನೆಯ ಮುಂಭಾಗದಿಂದ ವಿದ್ಯುತ್ ಚಾಲಿತ ವಾಹನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ್ ಪುತ್ಥಳಿಯವರೆಗೆ ಸಾಗಿ ಬಂದರು.

ಕಾರ್ಯಕ್ರಮವನ್ನು ಜಿಲ್ಲಾಡಳಿತವೇ ಆಯೋಜಿಸಿದ್ದರೂ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಅಲ್ಲಿ ಯಾವುದೇ ಆದ್ಯತೆ ದೊರೆಯಲಿಲ್ಲ. ಸುಮ್ಮನೆ ಕುಳಿತು ಎದ್ದು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.