ಸೊರಬ: ಮುಖ್ಯಮಂತ್ರಿ ಹುದ್ದೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಂದುವರಿಸುವಂತೆ ಬಿಜೆಪಿ ವರಿಷ್ಠರಿಗೆ ಸಾಮೂಹಿಕವಾಗಿ ಒತ್ತಡ ಹೇರುತ್ತಿರುವ ಸ್ವಾಮೀಜಿಗಳು ಪೀಠ ತ್ಯಾಗ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಆಗ್ರಹಿಸಿದ್ದಾರೆ.
‘12ನೇ ಶತಮಾನದಲ್ಲಿ ಬಸವಣ್ಣ ಪರಿಶಿಷ್ಟ ವರ್ಗದವರು, ಹಿಂದುಳಿದವರ ಬಗ್ಗೆ ಸಾಮಾಜಿಕ ಕಾಳಜಿ ಹೊಂದಿ ಜಾತಿ ವಿನಾಶಕ್ಕಾಗಿ ಪ್ರಭುತ್ವದ ವಿರುದ್ಧ ಹೋರಾಡಿದರು. ನಾಡಿನ ಬಹುತೇಕ ಸ್ವಾಮೀಜಿಗಳು ಬಸವಣ್ಣನ ಚಿಂತನೆಗಳನ್ನು ಒಪ್ಪಿಕೊಂಡು ಸಮಾಜದಲ್ಲಿ ಎಲ್ಲ ವರ್ಗದ ಹಿತವನ್ನು ಕಾಪಾಡುವ ಬದಲು ತಮಗಿರುವ ಘನತೆ, ಗೌರವ ಮರೆತು ಯಡಿಯೂರಪ್ಪ ಅವರು ಜೈಲಿನಿಂದ ಹೊರ ಬಂದಾಗಲೂ ಸ್ವಾಮೀಜಿಗಳು ಸಂಭ್ರಮಪಟ್ಟಿದ್ದನ್ನು ಜನರು ಮರೆತಿಲ್ಲ. ಈಗ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬಂದಿರುವುದನ್ನು ಮನಗಂಡು ಒಂದೇ ಸಮುದಾಯದ ಸ್ವಾಮೀಜಿಗಳು ಬಹಿರಂಗವಾಗಿ ಬಿಜೆಪಿ ಹೈಕಮಾಂಡ್‌ಗೆ ಒತ್ತಡ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದ್ದಾರೆ.
‘ಪ್ರಗತಿಪರ ಚಿಂತನೆ ಹೊಂದಿದ್ದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಮುರುಘಾ ಮಠದ ಶರಣರು ಹಾಗೂ ಸಿರಿಗೇರಿ ಶ್ರೀಗಳ ಮೇಲೆ ಜಾತ್ಯತೀತ ನಂಬಿಕೆಯನ್ನು ಸಮಾಜ ಹೊಂದಿತ್ತು. ಆದರೆ, ಯಡಿಯೂರಪ್ಪ ಅವರ ಮೇಲೆ ವ್ಯಾಮೋಹ ಉಂಟಾಗಿ ಒಂದು ರಾಜಕೀಯ ಪಕ್ಷಕ್ಕೆ ಬ್ಲಾಕ್‌ಮೇಲ್ ಮಾಡುವ ತಂತ್ರಕ್ಕೆ ಮುಂದಾಗಿರುವ ಸ್ವಾಮೀಜಿಗಳು ಲೌಖಿಕ ಜೀವನ ಇಷ್ಟಪಡುತ್ತಿದ್ದಾರೆ. ಪರೋಕ್ಷವಾಗಿ ಒಂದು ಸಮುದಾಯ ಅಥವಾ ಪಕ್ಷವನ್ನು ಬೆಂಬಲಿಸುವ ಮಠಾಧೀಶರು ಚುನಾವಣೆಗೆ ಸ್ಪರ್ಧಿಸಿ ರಾಜ್ಯವನ್ನು ಮುನ್ನಡೆಸಲಿ’ ಎಂದು ಸವಾಲು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.