ADVERTISEMENT

ಶಾಸಕರಿಗೆ ಚುನಾವಣೆಯಲ್ಲಿ ಗೆಲ್ಲುವ ಭ್ರಮೆ ಬೇಡ: ಬಿ.ಎಸ್. ಯಡಿಯೂರಪ್ಪ

ಅಭಿನಂದನಾ ಸಮಾರಂಭದಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 5:44 IST
Last Updated 4 ಸೆಪ್ಟೆಂಬರ್ 2022, 5:44 IST
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಶಾಸಕ ಕೆ.ಎಸ್‌. ಈಶ್ವರಪ್ಪ ಹೂಗುಚ್ಛ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಶಾಸಕ ಕೆ.ಎಸ್‌. ಈಶ್ವರಪ್ಪ ಹೂಗುಚ್ಛ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.   

ಶಿವಮೊಗ್ಗ: ‘ಶಾಸಕರು ನಾವು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿರದೇ, ತಮ್ಮ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಮತದಾರರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದುಶಾಸಕಬಿ.ಎಸ್. ಯಡಿಯೂರಪ್ಪ ಹೇಳಿದರು.

ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಕಾರಣ ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನದ ಗುರಿ ನೀಡಿದ್ದು, ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆ ಹಾಗೂ ಚುನಾವಣೆಗೆ ಸಿದ್ಧರಾಗಬೇಕು’ ಎಂದು ಹೇಳಿದರು.

ADVERTISEMENT

‘ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷ ಕೇಂದ್ರೀಯ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ರಾಜ್ಯ ಪ್ರವಾಸ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆ ಮತ್ತಷ್ಟು ಬಲಪಡಿಸಲು ಪ್ರಯತ್ನ ನಡೆಸುತ್ತೇವೆ’ ಎಂದು ತಿಳಿಸಿದರು.

‘ದೇಶಕ್ಕೆ ಮೋದಿ ಹೇಗೋ ಹಾಗೆ ರಾಜ್ಯಕ್ಕೆ ಯಡಿಯೂರಪ್ಪ. ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ರಾಷ್ಟ್ರಮಟ್ಟದ ನಾಯಕರವರೆಗೂ ಅಭಿನಂದನೆ ಸಲ್ಲಿಸಲಾಗುತ್ತಿದೆ. ಎಲ್ಲ ವರ್ಗಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ಹೀಗಾಗಿಯೇ ಕೇಂದ್ರ ನಾಯಕರು ತೀರ್ಮಾನಿಸಿ ಅವರಿಗೆ ದೊಡ್ಡ ಹುದ್ದೆ ನೀಡಿದ್ದಾರೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಸಚಿವರಾದ ಆರಗ ಜ್ಞಾನೇಂದ್ರ, ಕೆ.ಸಿ. ನಾರಾಯಣಗೌಡ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಕೆ.ಬಿ.ಅಶೋಕ್ ನಾಯ್ಕ್, ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ವಿಭಾಗ ಪ್ರಭಾರ ಗಿರೀಶ್ ಪಟೇಲ್, ಜಗದೀಶ್, ಬಿ.ಸ್ವಾಮಿರಾವ್, ಕೆ.ಜಿ. ಕುಮಾರಸ್ವಾಮಿ ಇದ್ದರು.

ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ತರುತ್ತೇವೆ.ಶೀಘ್ರ ಶಿವಮೊಗ್ಗದಲ್ಲಿ ಬಿಜೆಪಿ ಸಮಾವೇಶ ನಡೆಸಲಾಗುವುದು. ಸಮಾವೇಶಕ್ಕೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರನ್ನು ಸೇರಿಸಲಾಗುವುದು.

– ಬಿ.ಎಸ್.ಯಡಿಯೂರಪ್ಪ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.