ADVERTISEMENT

ಡಿ.ಕೆ.ಶಿವಕುಮಾರ್ ಮೇಕೆದಾಟು ಯಾತ್ರೆಗೆ ಸಿದ್ದರಾಮೋತ್ಸವ ಪ್ರತ್ಯುತ್ತರ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 4:35 IST
Last Updated 9 ಆಗಸ್ಟ್ 2022, 4:35 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಶಿಕಾರಿಪುರ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಿದ್ದರಾಮೋತ್ಸವವು ಡಿ.ಕೆ.ಶಿವಕುಮಾರ್ ಅವರ ಮೇಕೆದಾಟು ಪಾದಯಾತ್ರೆಗೆ ಪ್ರತ್ಯುತ್ತರವಾಗಿರಬಹುದು’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಹಗ್ಗಜಗ್ಗಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ತಮ್ಮ ನಾಯಕತ್ವ ಪರೀಕ್ಷೆ ಮಾಡಿಕೊಳ್ಳಲು ಮೇಕೆದಾಟು ಪಾದಯಾತ್ರೆ ಮಾಡಿದರು. ಸಹಜ ವಾಗಿಯೇ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ನಡೆಸುವ ಮೂಲಕ ಮೇಕೆದಾಟು ಪಾದಯಾತ್ರೆಗೆ ಪ್ರತ್ಯುತ್ತರ ನೀಡಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಕಾಂಗ್ರೆಸ್ ಆಂತರಿಕ ಕಲಹದಲ್ಲಿ ಬಿಜೆಪಿ ತಲೆ ಹಾಕುವುದಿಲ್ಲ’ ಎಂದು ಹೇಳಿದರು.

ಶಿಕಾರಿಪುರದಿಂದ ಸ್ಪರ್ಧೆ; ಪಕ್ಷದ ನಿರ್ಧಾರಕ್ಕೆ ಬದ್ಧ:

ADVERTISEMENT

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದಲೇ ನಾನು ಸ್ಪರ್ಧಿಸಬೇಕೆ ಎಂಬ ಪಕ್ಷ ನಿರ್ಧಾರ ಕೈಗೊಳ್ಳಲಿದೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.

‘ತಾಲ್ಲೂಕಿನ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದುಯಡಿಯೂರಪ್ಪ ಅವರು ‘ವಿಜಯೇಂದ್ರ ಈ ಕ್ಷೇತ್ರದಿಂದ
ಸ್ಪರ್ಧಿಸುತ್ತಾನೆ’ ಎಂದು ಘೋಷಿಸಿದ್ದರು. ಆದರೆ, ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ಈ ಕ್ಷೇತ್ರದ ಅಭ್ಯರ್ಥಿಯಾಗಲು ನಾನು ಇಲ್ಲಿ ಪ್ರವಾಸ ಮಾಡುತ್ತಿಲ್ಲ. ಶಿಕಾರಿಪುರ ಕ್ಷೇತ್ರ ನನಗೆ ಹೊಸದಲ್ಲ. ಹಿಂದೆಯೂ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡುತ್ತಿದ್ದೇನೆ’ ಎಂದು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮ ಮರೆಯಲು ಸಾಧ್ಯವಿಲ್ಲ. ಗಾಂಧೀಜಿ ಕರೆ ನೀಡಿದ ಚಲೇಜಾವ್ ಚಳವಳಿಗೆ ಪೂರಕವಾಗಿ ಬ್ರಿಟಿಷರ ವಿರುದ್ಧ ಈಸೂರು ಹೋರಾಟಗಾರರು ಹೋರಾಡಿ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡಿದ್ದರು. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶದಲ್ಲಿ 20 ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಬೇಕು ಎಂಬ ಕರೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ರಾಜ್ಯದಲ್ಲೂ ಕನಿಷ್ಠ 75 ಲಕ್ಷ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಬಿಜೆಪಿ ಕರೆ ನೀಡಿದೆ. ತಾಲ್ಲೂಕಿನಲ್ಲಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಬಿಜೆಪಿ ಸರಣಿ ಸಭೆ ನಡೆಸಿದೆ. ಈ ಕಾರ್ಯಕ್ರಮ
ಮೂಲಕ ಯಾವುದೇ ರಾಜಕಾರಣ ಬಿಜೆಪಿ ಮಾಡುತ್ತಿಲ್ಲ’ ಎಂದು ಹೇಳಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ವೀರೇಂದ್ರ ಪಾಟೀಲ್, ಶಿಮೂಲ್ ನಿರ್ದೇಶಕ ನಿಂಬೆಗೊಂದಿ ಸಿದ್ದಲಿಂಗಪ್ಪ, ಪುರಸಭೆ ಸದಸ್ಯರಾದ ಗುರುರಾಜ್ ಜಗತಾಪ್, ರೇಣುಕಾಸ್ವಾಮಿ, ಸಾಮಾಜಿಕ ಜಾಲತಾಣ ಸಂಚಾಲಕ ನಾಗೀಹಳ್ಳಿ ಗಣೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.