ADVERTISEMENT

ಬೆಂಗಳೂರು-ಶಿವಮೊಗ್ಗ ಮಧ್ಯೆ ಫೆ. 4ರಿಂದ ಜನ ಶತಾಬ್ಧಿ ಸಂಚಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 12:38 IST
Last Updated 29 ಜನವರಿ 2019, 12:38 IST
   

ಶಿವಮೊಗ್ಗ: ಬೆಂಗಳೂರು, ಶಿವಮೊಗ್ಗ ಮಧ್ಯೆ ಫೆ. 4ರಿಂದ ಜನ ಶತಾಬ್ಧಿ ರೈಲು ಸಂಚರಿಸಲಿದೆಎಂದು ಸಂಸದ ಬಿ.ವೈ. ರಾಘವೇಂದ್ರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಲೆನಾಡಿನ ಜನರ ಅಪೇಕ್ಷೆಯಂತೆ ವಾರಕ್ಕೆ 3ದಿನ ರೈಲು ಸಂಚರಿಸಲಿದೆ. ಸೋಮವಾರ, ಬುಧವಾರ, ಶುಕ್ರವಾರ ಶಿವಮೊಗ್ಗದಿಂದ ಬೆಳಿಗ್ಗೆ 5.30ಕ್ಕೆ ಈ ರೈಲು ಹೊರಟು 10ಕ್ಕೆ ಯಶವಂತಪುರ ತಲುಪಲಿದೆ. ಮುಂದಿನ ದಿನಗಳಲ್ಲಿ ಮೆಜೆಸ್ಟಿಕ್‌ವರೆಗೆ ಸಾಗಲು ಕೋರಲಾಗುವುದು. ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಟು ರಾತ್ರಿ 10ಕ್ಕೆ ಶಿವಮೊಗ್ಗ ಸೇರುತ್ತದೆ ಎಂದು ಅವರು ತಿಳಿಸಿದರು.

ಸದ್ಯಕ್ಕೆ ಈ ರೈಲು ಭದ್ರಾವತಿ, ಬೀರೂರು, ಕಡೂರು, ಅರಸೀಕೆರೆ, ತುಮಕೂರಿನಲ್ಲಿ ನಿಲುಗಡೆ ನೀಡುತ್ತದೆ. 3 ದಿನಗಳ ಜತೆಗೆ ಪ್ರತಿ ಶನಿವಾರ ಬೆಳಿಗ್ಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಪ್ರತಿ ಭಾನುವಾರ ಸಂಜೆ ಯಶವಂತಪುರದಿಂದ ಶಿವಮೊಗ್ಗಕ್ಕೆ ಸೌಲಭ್ಯ ಇರುತ್ತದೆ.

ADVERTISEMENT

ಫೆ.3ರ ಸಂಜೆ 6ಕ್ಕೆ ಶಿವಮೊಗ್ಗ ರೈಲಲುನಿಲ್ದಾಣದ ಮುಂಭಾಗ ಸಾಂಕೇತಿಕ ಚಾಲನೆ ನೀಡಲಾಗುವುದು ಎಂದರು.

ರಾಗಿಗುಡ್ಡ: ಫೆ. 3ಕ್ಕೆ ಇಎಸ್‌ಐ ಆಸ್ಪತ್ರೆಗೆ ಶಂಕುಸ್ಥಾಪನೆ

ಜಿಲ್ಲೆಯ ಕಾರ್ಮಿಕ ಸಮುದಾಯದ ಬಹು ದಿನಗಳ ನಿರೀಕ್ಷೆ ಇಎಸ್‌ಐ ಆಸ್ಪತ್ರೆಗೆ ಫೆ. 3ರಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶಾಂತಿನಗರ ವಾರ್ಡ್‌ ವ್ಯಾಪ್ತಿಯ ರಾಗಿಗುಡ್ಡದಲ್ಲಿ ಅಂದು ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ

ಬಿ.ವೈ. ರಾಘವೇಂದ್ರ

ನಿಗದಿಯಾಗಿದೆ. 5ಎಕರೆ ವಿಸ್ತಾರದಲ್ಲಿ ಸುಮಾರು ₹ 85 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಲಿದೆ ಎಂದುರಾಘವೇಂದ್ರ ಮಾಹಿತಿ ನೀಡಿದರು.

ಜಿಲ್ಲೆಯ 66.183 ಕಾರ್ಮಿಕರು ಇಎಸ್ಐ ಕಾರ್ಡ್‌ ಹೊಂದಿದ್ದಾರೆ. ಶಿವಮೊಗ್ಗ ತಾಲ್ಲೂಕಿನಲ್ಲೇ 52,647 ಕಾರ್ಡುದಾರರು ಇದ್ದಾರೆ. ಭದ್ರಾವತಿ ತಾಲ್ಲೂಕಿನಲ್ಲಿ 11.062 ಕಾರ್ಮಿಕರು ಇದ್ದಾರೆ. ಅವರ ಕುಟುಂಬದ ಸದಸ್ಯರೂ ಸೇರಿ ಒಟ್ಟು 2.5 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ವಿವರ ನೀಡಿದರು.

ಕುಂಸಿಯಲ್ಲಿ ಇಂದು ರೈಲು ತಂಗುದಾಣ ಶಂಕುಸ್ಥಾಪನೆ

ಕುಂಸಿ ಮತ್ತು ಅರಸಾಳು ರೈಲುನಿಲ್ದಾಣದಲ್ಲಿ ತಂಗುದಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಜ.30ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು. ಅಂದು ಬೆಳಿಗ್ಗೆ 9.30ಕ್ಕೆ ಕುಂಸಿರೈಲು ನಿಲ್ದಾಣದಲ್ಲಿ ಹಾಗೂ 11.30ಕ್ಕೆ ಅರಸಾಳು ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಂಸಿ ರೈಲುನಿಲ್ದಾಣ ಅಭಿವೃದ್ಧಿಗೆ ₹ 3 ಕೋಟಿ ಹಾಗೂ ಅರಸಾಳು ರೈಲು ನಿಲ್ದಾಣ ಅಭಿವೃದ್ಧಿಗೆ ₹ 1.50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಈ ಹಣದಲ್ಲಿ ಪ್ಲ್ಯಾಟ್‌ಫಾರಂ ವಿಸ್ತರಣೆ, ಕುಡಿಯುವ ನೀರಿನ ವ್ಯವಸ್ಥೆ, ಹಳೆ ಕಟ್ಟಡಗಳ ದುರಸ್ತಿ, ಶೌಚಾಲಯ ಮತ್ತಿತರ ಮೂಲಸೌಕರ್ಯ ಕಲ್ಪಿಸಲಾಗುವುದು. ಅರಸಾಳು ಬಳಿ ಪಾದಚಾರಿ ಮೇಲು ಸೇತುವೆ ನಿರ್ಮಿಸಲಾಗುವುದು ಎಂದು ವಿವರ ನೀಡಿದರು.

ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವರಿ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಕೆ.ಜಿ.ಅಶೋಕ್‌ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು, ಆಯನೂರು ಮಂಜುನಾಥ್, ಎಸ್.ಎಲ್.ಭೋಜೇಗೌಡ, ಆರ್.ಪ್ರಸನ್ನಕುಮಾರ್, ಸಿ.ಎಂ.ಇಬ್ರಾಹಿಂ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಚ್.ಕೆ.ಮಹೇಶ್ ಭಾಗವಹಿಸುವರು. ಅರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಡಿ.ಎಸ್.ಅರುಣ್, ಬಿಳಕಿ ಕೃಷ್ಣಮೂರ್ತಿ, ಎನ್.ಜೆ.ರಾಜಶೇಖರ್, ನಾಗರಾಜ್, ಜ್ಞಾನೇಶ್ವರ್, ಎಸ್.ಎಸ್.ಜ್ಯೋತಿ ಪ್ರಕಾಶ್, ಮಾಲತೇಶ್, ಮಧುಸೂಧನ್, ಹಿರಣಯ್ಯ, ಅಣ್ಣಪ್ಪ, ಪದ್ಮಿನಿ, ಗಂಗಾಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.