ADVERTISEMENT

ಬೆಂಗಳೂರು–ಶಿವಮೊಗ್ಗ: ವಾರದ ಆರು ದಿನ ಜನಶತಾಬ್ಧಿ

ಅರಸಾಳು ರೈಲು ನಿಲ್ದಾಣಕ್ಕೆ ‘ಮಾಲ್ಗುಡಿ’ ಹೆಸರು ನಾಮಕರಣಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 14:15 IST
Last Updated 2 ಮಾರ್ಚ್ 2019, 14:15 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ಬೆಂಗಳೂರು-ಶಿವಮೊಗ್ಗ ಮಧ್ಯೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ಜನಶತಾಬ್ಧಿ ರೈಲು ಇನ್ನು ಮುಂದೆ ವಾರದಲ್ಲಿ ಆರು ದಿನ ಸಂಚರಿಸಲಿದೆ.

ಶಿವಮೊಗ್ಗ-ಬೆಂಗಳೂರು ಮಧ್ಯೆ ಜನಶತಾಬ್ಧಿ ಸಂಚಾರಿಸಬೇಕು ಎನ್ನುವುದು ಜಿಲ್ಲೆಯ ಜನರ ಬಹುದಿನದ ಬೇಡಿಕೆ. ರೈಲ್ವೆ ಇಲಾಖೆ ಮನವಿ ಮಾಡಿದ್ದ ಪರಿಣಾಮ ಕೆಲವು ದಿನಗಳ ಹಿಂದೆ ಜನಶತಾಬ್ಧಿ ಸಂಚಾರ ಪ್ರಾರಂಭವಾಗಿತ್ತು. ಈಗ 6 ದಿನಗಳಿಗೆ ವಿಸ್ತರಿಸಲಾಗಿದೆ. ಮಂಗಳವಾರ ರಜೆ ಇರುತ್ತದೆ. ಕೇಂದ್ರ ರೈಲ್ವೆ ಮಂಡಳಿ ಈಗಾಗಲೇ ಅಧಿಕೃತ ಘೋಷಣೆ ಮಾಡಿದೆ. ಎರಡು, ಮೂರು ದಿನಗಳಲ್ಲಿ ಆದೇಶ ಅನುಷ್ಠಾನಗೊಳ್ಲಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯ ಅರಸಾಳು ರೈಲುನಿಲ್ದಾಣ ಮೇಲ್ದರ್ಜೆಗೇರಿಸಲು ಸತತ ಪ್ರಯತ್ನ ಮಾಡಲಾಗಿತ್ತು. ಅದರ ಫಲವಾಗಿ ₨3 ಕೋಟಿ ವೆಚ್ಚದಲ್ಲಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿದೆ. ಈ ನಿಲ್ದಾಣಕ್ಕೆ ‘ಮಾಲ್ಗುಡಿ’ ಹೆಸರು ನಾಮಕರಣ ಮಾಡಲು ಮನವಿ ಮಾಡಲಾಗಿದೆ. ಶಿವಮೊಗ್ಗ–ತಿರುಪತಿ ಹಾಗೂ ಶಿವಮೊಗ್ಗ–ಚೆನ್ನೈ ಮಧ್ಯೆ ರೈಲು ಸಂಚಾರಕ್ಕೆ ಅವಕಾಶ ನೀಡಲು ರೈಲ್ವೆ ಸಚಿವರ ಜತೆ ಚರ್ಚೆ ನಡೆಸಿದ್ದೇನೆ. ಸಂಚಾರಕ್ಕೆ ಅನುಮತಿ ದೊರಕುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ರಾಪಿಡ್ ಆಕ್ಷನ್ ಫೋರ್ಸ್‌ (ಆರ್ಎಎಫ್) ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ಈ ಹಿಂದೆ ಒಪ್ಪಿಗೆ ಸೂಚಿಸಿತ್ತು. ಈಗ ಭದ್ರಾವತಿಯಲ್ಲಿ 50 ಎಕರೆ ಜಾಗ ನೀಡಲು ರಾಜ್ಯಸರ್ಕಾರ ಒಪ್ಪಿದೆ. ಈ ಕುರಿತು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಸುಮಾರು 75 ಸಾರ್ವಜನಿಕ ಉದ್ದಿಮೆ ಸ್ಥಗಿತಗೊಳಿಸಲು ಸರ್ಕಾರ ಯೋಚಿಸಿತ್ತು. ಪಟ್ಟಿಯಲ್ಲಿ ಭದ್ರಾವತಿಯ ವಿಐಎಸ್ಎಲ್ ಕೂಡ ಸೇರಿತ್ತು. ಆದರೆ ಕೇಂದ್ರದ ಮೇಲೆ ನಿರಂತರ ಒತ್ತಡ ಹೇರಿದ್ದರ ಫಲವಾಗಿ ಪಟ್ಟಿಯಿಂದ ಕೈಬಿಟ್ಟಿದೆ. ಬಳ್ಳಾರಿ ಜಿಲ್ಲೆ ರಮಣ ದುರ್ಗದಲ್ಲಿ ರಾಜ್ಯ ಸರ್ಕಾರ ನೀಡಿದ 150 ಎಕರೆ ಗಣಿಗೆ ಕೇಂದ್ರ ಅನುಮೋದನೆ ನೀಡಿದೆ ಎಂದರು.

ಪಾಕಿಸ್ತಾನ ಮೇಲೆ ಭಾರತೀಯ ಸೈನಿಕರ ದಾಳಿ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯ ಲಾಭಕ್ಕಾಗಿ ಯಾವುದೇ ಹೇಳಿಕೆ ನೀಡಿಲ್ಲ. ಸಂದಿಗ್ಧ ಸ್ಥಿತಿಯಲ್ಲಿ ದೇಶದ ಪ್ರಧಾನಿ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದ್ದರು ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌. ದತ್ತಾತ್ರಿ ಮಾತನಾಡಿ, ಅರಣ್ಯವಾಸಿಗಳನ್ನು ತೆರವು ಗೊಳಿಸಲು ಸುಪ್ರೀಂಕೋರ್ಟ್‌ ನೀಡಿದ ತೀರ್ಪು ಪ್ರಶ್ನಿಸಿ ತಕ್ಷಣ ಮೇಲ್ಮನವಿ ಸಲ್ಲಿಸಲು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಪಕ್ಷ ಎಂದಿಗೂ ರೈತರ ಪರ ಇರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್.ಅರುಣ್, ಎಸ್.ಎಸ್. ಜ್ಯೋತಿಪ್ರಕಾಶ್, ವೀರಭದ್ರಪ್ಪ ಪೂಜಾರ್, ಬಿಳಕಿ ಕೃಷ್ಣಮೂರ್ತಿ, ಮಾಲತೇಶ್, ಉದಯ ಕುಮಾರ್, ಹಿರಣ್ಣಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.