ADVERTISEMENT

ಬರಪೀಡಿತ ಜಿಲ್ಲೆ ಘೋಷಣೆಗೆ ಸಂಸದ ರಾಘವೇಂದ್ರ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 11:02 IST
Last Updated 22 ಜೂನ್ 2019, 11:02 IST
ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ   

ಶಿವಮೊಗ್ಗ: ಮುಂಗಾರು ವಿಫಲವಾಗಿರುವ ಕಾರಣ ಇಡೀ ಶಿವಮೊಗ್ಗ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವಾಗಿ ಪರಿಗಣಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.

ಜೂನ್‌ ಮುಗಿಯುತ್ತಾ ಬಂದರೂ ಮಳೆ ಆರಂಭವಾಗಿಲ್ಲ. ಶೇ 80ರಷ್ಟು ಮಳೆ ಕೊರತೆ ಇದೆ. ಇಡೀ ಮಲೆನಾಡಿನ ಸ್ಥಿತಿ ಶೋಚನೀಯವಾಗಿದೆ. ಎಲ್ಲೆಡೆ ಬರಗಾಲ ಆವರಿಸಿದೆ. ಈ ಬಾರಿ 1.60 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಇದುವರೆಗೂ ಮೂರೂವರೆ ಸಾವಿರ ಎಕರೆ ಬಿತ್ತನೆಯಾಗಿದೆ. ಬಿತ್ತನೆಯಾದ ಬೆಳೆಯೂ ಒಣಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣ ಬರಗಾಲ ಪೀಡಿತ ಜಿಲ್ಲೆಯಾಗಿ ಘೋಷಿಸಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣೆಬೈರೇಗೌಡ ಶಾಸ್ತ್ರಕ್ಕೆ ಸಭೆ ನಡೆಸಿದ್ದಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ರೈತರಿಗೆ ಯಾವುದೇ ಭರವಸೆ ನೀಡಿಲ್ಲ. ಮೇವು, ನೀರಿಗೂ ತತ್ವಾರವಿದೆ. ಬರಗಾಲದಿಂದ ತತ್ತರಿಸಿರುವ ಜನರ ನೋವಿಗೆ ಸ್ಪಂದಿಸಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸಿದವರಿಗೂ ಹಣ ನೀಡಿಲ್ಲ ಎಂದು ದೂರಿದರು.

ADVERTISEMENT

ಬೆಂಗಳೂರಿಗೆ ನೀರು ಬೇಡ:ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ನಿರ್ಧಾರ ಖಂಡನೀಯ. ಬೆಂಗಳೂರು ಪ್ರಗತಿಯನ್ನೇ ರಾಜ್ಯದ ಪ್ರಗತಿ ಎಂದು ಸರ್ಕಾರ ಬಿಂಬಿಸುತ್ತಿದೆ. ಪರಿಸರ ಉಳಿಸುವ ಯೋಜನೆ ರೂಪಿಸಬೇಕು. ಆರ್ಥಿಕ ನಷ್ಟದ ಇಂತಹ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಲಿಂಗನಮಕ್ಕಿ ಜಲವಿದ್ಯುತ್ ಉತ್ಪಾದನೆಗೆ ಹೆಸರಾಗಿದೆ. ಬೆಂಗಳೂರಿಗೆ ನೀರು ತೆಗೆದುಕೊಂಡು ಹೋದರೆ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತದೆ. ಅಕಸ್ಮಾತ್ ಯೋಜನೆ ರೂಪುಗೊಂಡರೆ ಬಿಜೆಪಿ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ ಎಂದರು.

ವಿಐಎಸ್‌ಎಲ್‌ ಉಳಿವಿಗೆ ಯತ್ನ:ವಿಐಎಸ್ಎಲ್ ಕಾರ್ಖಾನೆ ನಷ್ಟದಲ್ಲಿದೆ. 2009–10ರಿಂದ ಪ್ರತಿ ವರ್ಷ ₨ 100 ಕೋಟಿ ನಷ್ಟ ಅನುಭವಿಸುತ್ತಿದೆ. ಕಾರ್ಖಾನೆ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರವೂ ಗಮನಹರಿಸಬೇಕು. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು.

ಕೇಂದ್ರ ಸರ್ಕಾರ ‘ಕೃಷಿ ಸಮ್ಮಾನ್’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಿಂದ ಪ್ರತಿ ತಾಲ್ಲೂಕಿಗೂ ₨ 25ಕೋಟಿಯಿಂದ ₨ 30 ಕೋಟಿ ಹಣ ಸಿಗುತ್ತದೆ. ಮೊದಲ ಕಂತು ₨ 12 ಸಾವಿರ ಕೋಟಿ ಬಿಡುಗಡೆಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್‌ 30 ಕೊನೆಯ ದಿನ. ರೈತರು ತಕ್ಷಣ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ದತ್ತಾತ್ರಿ, ಎಸ್.ಎನ್.ಚನ್ನಬಸಪ್ಪ, ಬಿಳಕಿ ಕೃಷ್ಣಮೂರ್ತಿ, ಅನಿತಾ ರವಿಶಂಕರ್, ಮಂಗೋಟೆ ರುದ್ರೇಶ್, ಧರ್ಮಪ್ರಸಾದ್, ಮಧುಸೂದನ್, ನಾಗರಾಜ್, ಅಣ್ಣಪ್ಪ, ಹಿರಣ್ಣಯ್ಯ, ನಾಗರಾಜ್, ರತ್ನಾಕರ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.