ಶಿವಮೊಗ್ಗ: ಮಲೆನಾಡು ರೌಂಡ್ ಟೇಬಲ್ ವತಿಯಿಂದ ಕಾರ್ಪೋರೇಟ್ ಸಾಮಾಜಿಕ ನಿಧಿ ಹಾಗೂ ದಾನಿಗಳಿಂದ ಸಂಗ್ರಹಿಸಿದ ₹23 ಲಕ್ಷ ಹಣದಲ್ಲಿ ಶಿವಮೊಗ್ಗದ ಸೂಳೆಬೈಲಿನ ಸರ್ಕಾರಿ ಪ್ರೌಢಶಾಲೆಯ ಮೊದಲ ಅಂತಸ್ತಿನಲ್ಲಿ ನಿರ್ಮಿಸಿದ ಮೂರು ಕೊಠಡಿಗಳನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಎಲ್ಲವನ್ನು ಸರ್ಕಾರದಿಂದ ಮಾಡಲು ಸಾಧ್ಯವಿಲ್ಲ. ಇಂತಹ ಸಮಾಜಮುಖಿ ಕೆಲಸಗಳನ್ನು ದೇಶದಾದ್ಯಂತ ಸದ್ದಿಲ್ಲದೇ ರೋಟರಿ, ರೌಂಡ್ ಟೇಬಲ್ ಸಂಸ್ಥೆಗಳು ಮಾಡುತ್ತಿವೆ. ಅದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಪಿಯರ್ ಲೈಟ್ ಲೈನರ್ಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜಿಲ್ಲೆಯ 7 ಸರ್ಕಾರಿ ಶಾಲೆಗಳಿಗೆ ₹5 ಲಕ್ಷ ವೆಚ್ಚದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಸಂಸದರು ಶಾಲೆಗಳಿಗೆ ಹಸ್ತಾಂತರಿಸಿದರು.
ಮಲೆನಾಡು ರೌಂಡ್ ಟೇಬಲ್ ಸಂಸ್ಥೆಯು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಹಲವು ಕೊಡುಗೆಗಳ ನೀಡುತ್ತಿದೆ ಎಂದು ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಹಾಗೂ ಡಾ.ಧನಂಜಯ ಸರ್ಜಿ ಮಾತನಾಡಿದರು.
ಭದ್ರಾ ಕಾಡಾ ಮುಖ್ಯ ಎಂಜಿನಿಯರ್ ಪ್ರಶಾಂತ್, ರೌಂಡ್ ಟೇಬಲ್ ಮುಖ್ಯಸ್ಥರಾದ ಕುಮಾರ್ ಪಾಲ್ ಜೈನ್, ರೋಹನ್, ಸುಶೃತ್ ಬೆಳಗೂರ, ಈಶ್ವರ ಸರ್ಜಿ, ಆದಿತ್ಯ ಆಚಾರ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.