ಶಿವಮೊಗ್ಗ: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್ ಅಳವಡಿಸುವ ಕಾರ್ಯ ಮಂಗಳವಾರ ಪೂರ್ಣಗೊಂಡಿತು. ಕರ್ನಾಟಕ ನೀರಾವರಿ ನಿಗಮದ (ಕೆಎನ್‌ಎನ್) ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ರವಿಕುಮಾರ್ ನೇತೃತ್ವದಲ್ಲಿ ಕಳೆದ ಮೇ ತಿಂಗಳಿನಿಂದ ಆರಂಭವಾಗಿತ್ತು. ಸತತ ನಾಲ್ಕು ತಿಂಗಳು ಕಾಲ ಕಾಮಗಾರಿ ನಡೆದಿತ್ತು.
ಕಾಮಗಾರಿ ಮುಕ್ತಾಯಗೊಂಡ ಕಾರಣ ಈ ಹಿಂದೆ ಅಳವಡಿಸಿದ್ದ ತಾತ್ಕಾಲಿಕ ಗೇಟ್ ತೆಗೆದುಹಾಕಿ ನಾಲೆಗೆ ನೀರು ಹರಿಸಲಾಯಿತು. ಕಾಮಗಾರಿ ಹಿನ್ನೆಲೆಯಲ್ಲಿ ನಾಲೆಯಲ್ಲಿ ಇಲ್ಲಿಯವರೆಗೆ ಅರ್ಧ ಭಾಗ ನೀರು ಹರಿಸಲಾಗಿತ್ತು.
ಸದಾ ನೀರಿನಲ್ಲಿ ಮುಳುಗಿರುವ ಈ ಗೇಟ್‌ಗೆ ಸುಲಭವಾಗಿ ತುಕ್ಕು ಹಿಡಿಯದಂತೆ ತಡೆಯಲು ಹಾಗೂ ಒತ್ತಡ ತಡೆದುಕೊಳ್ಳಲು ಅಗತ್ಯವಿರುವಂತೆ ರೂಪಿಸಬೇಕಿತ್ತು. ಹೀಗಾಗಿ ಗೇಟ್ ತಯಾರಿಸಲು ಅತ್ಯಾಧುನಿಕ ಗುಣಮಟ್ಟದ ಉಕ್ಕನ್ನು ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್) ಒದಗಿಸಿದೆ. ತಾಂತ್ರಿಕ ವಿನ್ಯಾಸವನ್ನು 'ಅಪಾರ್' ಕಂಪೆನಿ ತಂತ್ರಜ್ಞರು ಮಾಡಿದ್ದಾರೆ.
ಎಡದಂಡೆ ನಾಲೆಯ ಗೇಟ್ ಲಾಕ್ ಆಗಿ ಸ್ಟ್ರಕ್ ಆಗಿ ಬಹಳ ವರ್ಷಗಳೇ ಆಗಿದ್ದು, ಅದು ಮೇಲೆ ಬರುತ್ತಿತ್ತು. ಆದರೆ ಕೆಳಗೆ ಹೋದಾಗ ಸರಿಯಾಗಿ ಕುಳಿತುಕೊಳ್ಳುತ್ತಿರಲಿಲ್ಲ. ಇದರಿಂದ ನಿರಂತರವಾಗಿ ನೀರು ಸೋರಿಕೆ ಆಗುತ್ತಿತ್ತು. ಹೀಗಾಗಿ ಕೆಎನ್‌ಎನ್ ಹೊಸ ಗೇಟ್ ಅಳವಡಿಕೆಗೆ ನಿರ್ಧರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.