ADVERTISEMENT

ಮಂಜುನಾಥ ಗೌಡ ವಿರುದ್ಧ ಪ್ರಕರಣ ದಾಖಲು

ನಕಲಿ ಬಂಗಾರ ಅಡಮಾನ ಪ್ರಕರಣದಲ್ಲಿ ಮತ್ತೆ ಎದುರಾದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:44 IST
Last Updated 28 ಫೆಬ್ರುವರಿ 2021, 5:44 IST
ಆರ್‌.ಎಂ.ಮಂಜುನಾಥ ಗೌಡ
ಆರ್‌.ಎಂ.ಮಂಜುನಾಥ ಗೌಡ   

ಶಿವಮೊಗ್ಗ: ನಕಲಿ ಬಂಗಾರ ಅಡಮಾನ ಸಾಲದ ಬಹುಕೋಟಿ ರೂಪಾಯಿಯ ಹಗರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿ.ರಾಜಣ್ಣ ರೆಡ್ಡಿ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಸಿ ಬ್ಯಾಂಕ್‌ನಲ್ಲಿ ₹ 62.75 ಕೋಟಿ ಮೌಲ್ಯದ ನಕಲಿ ಬಂಗಾರ ಅಡವಿಟ್ಟಿದ್ದ ಅವ್ಯವಹಾರ ಪ್ರಕರಣದಲ್ಲಿ ಆಡಳಿತಾತ್ಮಕ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿರುವುದರಿಂದ ಇವರಿಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಂಗಳೂರು ಪ್ರಾಂತದ ಸಹಕಾರ

ಸಂಘಗಳ ಜಂಟಿ ನಿಬಂಧಕರಾದ ಡಿ.ಪಾಂಡುರಂಗ ಗರಗ್ ಅವರು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರು ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಿದ್ದಾರೆ.

ADVERTISEMENT

ಪ್ರಕರಣದ ವಿವರ: ನಕಲಿ ಬಂಗಾರ ಅಡಮಾನ ಪ್ರಕರಣ 2014ರಲ್ಲಿ ಬೆಳಕಿಗೆ ಬಂದಿತ್ತು. 2004ರಿಂದ 2014‌ರ ನಡುವಿನ ಅವಧಿಯಲ್ಲಿ 490 ಸಾಲದ ಖಾತೆಗಳ ಮೂಲಕ ನಕಲಿ ಬಂಗಾರವನ್ನು ಅಡವಿಟ್ಟುಕೊಂಡು ಮತ್ತು 171 ಖಾತೆಗಳಲ್ಲಿ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ₹ 62.75 ಕೋಟಿ ಸಾಲ ನೀಡುವ ಮೂಲಕ ಅವ್ಯವಹಾರ ನಡೆಸಲಾಗಿತ್ತು.

ಈ ಘಟನೆ ಬೆಳಕಿಗೆ ಬಂದ ನಂತರ ಸಿಐಡಿ ತನಿಖೆ ನಡೆಸಿ ಹಗರಣದ ಪ್ರಮುಖ ಆರೋಪಿಗಳಾದ ನಗರ ಶಾಖೆಯ ವ್ಯವಸ್ಥಾಪಕಿಯಾಗಿದ್ದ ಶೋಭಾ, ಅಧ್ಯಕ್ಷರಾಗಿದ್ದ ಮಂಜುನಾಥ ಗೌಡ ಮತ್ತಿತರರ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸಲಾಗಿತ್ತು.

ಅದೇ ಕಾರಣಕ್ಕೆ ಬ್ಯಾಂಕ್ ಆಡಳಿತ ಮಂಡಳಿಯನ್ನೂ ಅಮಾನತುಗೊಳಿಸಲಾಗಿತ್ತು. ಆದರೆ, ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರ ನಡುವೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಮಂಜುನಾಥ ಗೌಡರ ಬಗ್ಗೆ ಮಾತ್ರ ವಿಚಾರಣಾ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. ಹೀಗಿದ್ದರೂ ಸರ್ಕಾರವು ಈ ಹಗರಣದಲ್ಲಿ ಮಂಜುನಾಥ ಗೌಡರ ಪಾತ್ರವಿದೆ ಎಂದು ಪರಿಭಾವಿಸಿ ಅವರ ಸದಸ್ಯತ್ವ ಅನರ್ಹಗೊಳಿಸಿತ್ತು. ಆದರೆ, ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ನಂತರ ನಡೆದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಮಂಜುನಾಥ ಗೌಡ ಮತ್ತೆ ಜಯಗಳಿಸಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು. ಹೀಗಿದ್ದರೂ ಸರ್ಕಾರ ಮತ್ತೆ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದರಿಂದ ಅವರು ಅನಿವಾರ್ಯವಾಗಿ ಸಹಕಾರ ವಲಯದಿಂದ ದೂರ ಉಳಿದಿದ್ದಾರೆ.

ಇದೀಗ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿರುವುದರಿಂದ ಮಂಜುನಾಥ ಗೌಡರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.