ಶಿವಮೊಗ್ಗ: ‘ಸಾಮಾಜಿಕ ನ್ಯಾಯಕ್ಕೆ ಬದ್ಧವಿರುವ ಮುಖ್ಯಮಂತ್ರಿ ಹಾಗೂ ಸರ್ಕಾರ ರಾಜ್ಯದಲ್ಲಿದೆ. ಸಾಮಾಜಿಕ, ಶೈಕ್ಷಣಿಕ (ಜಾತಿ ಜನಗಣತಿ) ಸಮೀಕ್ಷೆ ವರದಿ ಜಾರಿಗೊಳ್ಳುವುದು ನಿಶ್ಚಿತ. ಆ ಪ್ರಕ್ರಿಯೆಗೆ ಶುಕ್ರವಾರ ಚಾಲನೆ ದೊರೆತಿದೆ’ ಎಂದು ವರದಿ ಸಿದ್ಧಪಡಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ ಹೇಳಿದರು.
‘ಸಮೀಕ್ಷೆ ನಿಖರವಾಗಿ ನಡೆದಿಲ್ಲ. ವೈಜ್ಞಾನಿಕವಲ್ಲ ಎಂಬುದು ಕೆಲವರ ಆರೋಪ. ನಿಖರ ಪದಕ್ಕೆ ಶೇ 100ರಷ್ಟು ಎಂಬ ಅರ್ಥವಿದೆ. ಅಷ್ಟು ಹೇಳಲು ಕಷ್ಟ ಆಗಬಹುದು. ಸಮೀಕ್ಷೆ ವಿಧಾನವನ್ನು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿ, ತಜ್ಞರ ಸಲಹೆಯಂತೆ ರೂಪಿಸಲಾಗಿತ್ತು. ಹೀಗಾಗಿ ಅದು ವೈಜ್ಞಾನಿಕ ಸಮೀಕ್ಷೆ’ ಎಂದು ಶನಿವಾರ ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರದಿಯನ್ನು ಸಿದ್ಧಪಡಿಸುವಾಗ ಸರ್ಕಾರವೂ ಸೇರಿದಂತೆ ಯಾವುದೇ ರೀತಿಯ ಹಸ್ತಕ್ಷೇಪ ನಡೆದಿಲ್ಲ. ಸರ್ಕಾರಗಳು ಬದಲಾಗಿವೆ. ಹೀಗಾಗಿ ವರದಿ ಜಾರಿಯಾಗುವುದು ವಿಳಂಬ ಆಗಿರಬಹುದು’ ಎಂದು ಪ್ರತಿಕ್ರಿಯಿಸಿದರು.
‘ಕೆಲ ಸಮುದಾಯಗಳು ನಿರ್ದಿಷ್ಟ ಸಂಖ್ಯೆ ಕ್ಲೇಮು ಮಾಡುತ್ತಿರುವುದು ಆಯೋಗಕ್ಕೆ ಗೊತ್ತಿಲ್ಲ. ಅವರು ಈಗಿನ ಅಂಕಿ–ಅಂಶ ಒಪ್ಪಬೇಕಾಗುತ್ತದೆ. ನಿರೀಕ್ಷೆಗೆ ಅನುಗುಣವಾಗಿ ಜನಸಂಖ್ಯೆ ಇಲ್ಲ ಎಂದಾದರೆ, ನಿರೀಕ್ಷೆಯ ಮಾನದಂಡ ಏನು ಎಂಬುದು ಇಲ್ಲಿ ಪ್ರಶ್ನೆಯಾಗುತ್ತದೆ’ ಎಂದರು.
‘ಜಾತಿ ಆಧಾರಿತ ತಾರತಮ್ಯ ಹೋಗಲಾಡಿಸಿ ಸಮಾನತೆ ತರಬೇಕು ಎಂಬುದು ಸಂವಿಧಾನದ ಆಶಯ. ಇದಕ್ಕೆ ಜಾತಿಯೇ ದೊಡ್ಡ ಶತ್ರು. ಆ ಶತ್ರುವಿನ ಬಲಾಬಲ ಅರಿಯಲು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನೊಳಗೊಂಡ ಜಾತಿ ಗಣತಿ ಅಗತ್ಯ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.