ADVERTISEMENT

ಶಿವಮೊಗ್ಗ: ಕಾಲಮಿತಿಯೊಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ

ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 9:05 IST
Last Updated 6 ಸೆಪ್ಟೆಂಬರ್ 2021, 9:05 IST
ಶಿವಮೊಗ್ಗದ ವಿದ್ಯಾನಗರ ಅರಕೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದರು
ಶಿವಮೊಗ್ಗದ ವಿದ್ಯಾನಗರ ಅರಕೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದರು   

ಶಿವಮೊಗ್ಗ: ನಗರದ ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

ಇಲ್ಲಿನ ವಿದ್ಯಾನಗರ ಅರಕೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಶಿವಮೊಗ್ಗದಲ್ಲಿ ₹ 386 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ಕಾಮಗಾರಿ ನಿರೀಕ್ಷೆಯಂತೆ ನಡೆಯುತ್ತಿದೆ. ಮಳೆಯಿಂದಾಗಿ ಕಾಮಗಾರಿ ಸ್ವಲ್ಪ ನಿಧಾನವಾಗಿದ್ದರೂ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಶಿವಮೊಗ್ಗದಲ್ಲಿ ಇಂದು ರೈಲ್ವೆ ಓವರ್ ಬ್ರಿಡ್ಜ್ ಮತ್ತು ಹೊಸ ಸೇತುವೆ ನಿರ್ಮಾಣದ ₹ 600 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನಗರ ಮತ್ತು ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯಲ್ಲಿ ಇಂದು ಶಂಕುಸ್ಥಾಪನೆಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಭಾನುವಾರದಿಂದಲೇ ಆರಂಭಿಸಿ ಕಾಲ ಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತ ನಾಡಿ, ‘ಚಿತ್ರದುರ್ಗದಿಂದ ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ 13 ಕಿ.ಮೀ.ವರೆಗಿನ ರಸ್ತೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ 2014ರಲ್ಲೇ ಮಂಜೂರಾತಿ ದೊರೆತಿದ್ದು, ಚನ್ನಗಿರಿವರೆಗೆ ₹ 100 ಕೋಟಿ ಕಾಮಗಾರಿ ಬಾಕಿ ಇತ್ತು. ಈಗ ₹ 400 ಕೋಟಿ ಹೆಚ್ಚುವರಿ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದರು.

ಜಿಲ್ಲೆಯಿಂದ 36 ರೈಲುಗಳು ಸಂಚಾರ ಮಾಡುತ್ತಿದ್ದು, 8,500 ಜನರು ಪ್ರಯಾಣ ಮಾಡುತ್ತಿದ್ದಾರೆ. ಜನರ ಅನುಕೂಲಕ್ಕಾಗಿ ಶಿವಮೊಗ್ಗ ನಗರದ ವಿದ್ಯಾನಗರ ಬಳಿ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ₹ 20.12 ಕೋಟಿ ವೆಚ್ಚದಲ್ಲಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈವರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ₹ 8 ಸಾವಿರ ಕೋಟಿ ಅನುದಾನ ತರಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ವಿಮಾನ ನಿಲ್ದಾಣ ನಿರ್ಮಾಣದಿಂದ ಜಿಲ್ಲೆಯಲ್ಲಿ ಉದ್ಯೋಗಾವಕಾಶ, ಕೈಗಾರಿಕಾ ಕ್ಷೇತ್ರ ಬೆಳೆಯಲಿದ್ದು, ಸಾರ್ವಜನಿ ಕರಿಗೆ ಅನುಕೂಲವಾಗಲಿದೆ. ಲೋಕೋಪ ಯೋಗಿ ಸಚಿವರು ನಗರದಲ್ಲಿ ಆರಂಭಿಸಲಾಗಿರುವ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಗೊಳಿಸುವವರೆಗೆ ನಮಗೆ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಆರ್.ಪ್ರಸನ್ನಕುಮಾರ್, ಡಿ.ಎಸ್.ಅರುಣ್, ಜ್ಯೋತಿ ಪ್ರಕಾಶ್, ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ನಾಯಕ ಎಸ್.ಎನ್.ಚನ್ನಬಸಪ್ಪ, ಯಮನಾ ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.