ಶಿವಮೊಗ್ಗ: ರಾಜ್ಯದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ 3500 ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೆ ಶಿಕ್ಷಣದೊಂದಿಗೆ ನಿರಂತರವಾಗಿ ಚಿಕಿತ್ಸೆ ಹಾಗೂ ವೈದ್ಯಕೀಯ ಸವಲತ್ತು ಕಲ್ಪಿಸಲು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಪರಿಸರದಲ್ಲಿ ವಸತಿಯುತ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಯಾನ್ಸರ್ ಈಗ ವಾಸಿಯಾಗುವ ಕಾಯಿಲೆ. ಆದರೆ ಅದಕ್ಕೆ ಆರಂಭಿಕ ಹಂತದಿಂದಲೇ ನಿರಂತರ ಚಿಕಿತ್ಸೆ ಕೊಡಬೇಕಿದೆ. ಸಂಪೂರ್ಣ ಚಿಕಿತ್ಸೆಗೆ ಆರು ತಿಂಗಳು ಇಲ್ಲವೇ ಒಂದು ವರ್ಷ ಬೇಕಾಗುತ್ತದೆ. ಈ ಅವಧಿಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹೀಗಾಗಿ ವಸತಿಯುತ ಶಾಲೆ ಆರಂಭಿಸಲಾಗುತ್ತಿದೆ ಎಂದರು.
ಸರ್ಕಾರೇತರ ಸಂಸ್ಥೆಯೊಂದರಿಂದ (ಎನ್‌ಜಿಒ) ಸಮೀಕ್ಷೆ ನಡೆಸಿದ್ದು, ಕ್ಯಾನ್ಸರ್ ಪೀಡಿತ ಮಕ್ಕಳನ್ನು ಗುರುತಿಸಲಾಗಿದೆ. ಒಮ್ಮೆಗೆ 1500 ಮಕ್ಕಳಿಗೆ ವಸತಿಯುತ ಶಾಲೆಯಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು. ಕಿದ್ವಾಯಿ ಆಸ್ಪತ್ರೆ ಸಮೀಪದಲ್ಲಿಯೇ ಇಲಾಖೆಗೆ ಸೇರಿದ 3 ಎಕರೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಕ್ಕಳನ್ನು ನೋಡಿಕೊಳ್ಳಲು ಬರುವ ಪೋಷಕರಿಗೆ ಉಚಿತವಾಗಿ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಅಗತ್ಯ ಮೂಲ ಸೌಕರ್ಯ ಹಾಗೂ ಹಣಕಾಸು ವ್ಯವಸ್ಥೆ ಮಾಡಕೊಂಡು ಜುಲೈ ತಿಂಗಳಿಂದಲೇ ಶಾಲೆ ಕಾರ್ಯಾರಂಭ ಯೋಜಿಸಲಾಗಿದೆ. ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹಾಗೂ ಕರೆ ತರಲು ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಕ್ಯಾನ್ಸರ್‌ಪೀಡಿತರನ್ನು ರೋಗಿಗಳಂತೆ ನೋಡದೇ ಸಾಮಾನ್ಯ ಮಕ್ಕಳಂತೆ ಪರಿಗಣಿಸಿ ಶಿಕ್ಷಣ ನೀಡಲು ಶಿಕ್ಷಕರಿಗೂ ವಿಶೇಷ ತರಬೇತಿ ನೀಡಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದವರ ಘಟಕದ ಅಧ್ಯಕ್ಷ ಜಿ.ಡಿ.ಮಂಜುನಾಥ್ ಹಾಜರಿದ್ದರು.
‘ಡಯೆಟ್'ಗಳಿಗೆ ಕಳಪೆ ಸಾಧನೆ ಶಾಲೆಗಳ ಹೊಣೆ’:
ಪ್ರತೀ ಜಿಲ್ಲೆಯಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿದ ಶಾಲೆಗಳ ಪಟ್ಟಿ ಮಾಡಿ ಈ ಶೈಕ್ಷಣಿಕ ವರ್ಷದಿಂದ ಆಯಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಗಳಲ್ಲಿರುವ (ಡಯೆಟ್) ತಜ್ಞರಿಗೆ ಹಂಚಿಕೆ ಮಾಡಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
ಆ ಶಾಲೆಗಳ ಫಲಿತಾಂಶ ವೃದ್ಧಿಯ ಜವಾಬ್ದಾರಿ ಸಂಬಂಧಿಸಿದ ಶಿಕ್ಷಣ ತಜ್ಞರದ್ದು. ತಪ್ಪಿದಲ್ಲಿ ಅವರನ್ನು ಆ ಡಯೆಟ್‌ನಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗುವುದು. ಡಯೆಟ್‌ಗಳು ನಿಷ್ಕ್ರಿಯಗೊಂಡಿವೆ. ನಿರಾಶ್ರಿತರ ತಾಣಗಳಾಗಿವೆ ಎಂಬ ಆರೋಪಗಳ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.