ADVERTISEMENT

ಮಾರುಕಟ್ಟೆ ಸಂಸ್ಕೃತಿಯ ಅತಿರೇಕ ಪ್ರಶ್ನಿಸಬೇಕಿದೆ

ಚಿತ್ರ ಪ್ರದರ್ಶನ, ಅವಲೋಕನ- ಸಂವಾದದಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:40 IST
Last Updated 14 ಸೆಪ್ಟೆಂಬರ್ 2024, 15:40 IST
ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರೊಂದಿಗೆ ಸಂವಾದ ನಡೆಯಿತು 
ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರೊಂದಿಗೆ ಸಂವಾದ ನಡೆಯಿತು    

ಶಿವಮೊಗ್ಗ: ‘ಸಿನಿಮಾ ಮಾಧ್ಯಮ ಮಾರುಕಟ್ಟೆ ಸಂಸ್ಕೃತಿಗೆ ಮಾರು ಹೋಗಿದೆ. ನಾವೆಲ್ಲರೂ ಮಾರುಕಟ್ಟೆ ಸಂಸ್ಕೃತಿಯ ಕೂಸುಗಳು. ಇದಕ್ಕೆ ನನ್ನ ಆಕ್ಷೇಪ ಇಲ್ಲ. ಆದರೆ, ಇಲ್ಲಿ ಅವಶ್ಯಕತೆಗಿಂತ ಹೆಚ್ಚು ಹಣ ಮಾಡುವ ಉದ್ದೇಶದಿಂದ ಕೊಲೆ, ಹಿಂಸೆ, ಅತ್ಯಾಚಾರದಂತಹ ಸಂಗತಿಗಳನ್ನು ಬಂಡವಾಳ ಮಾಡಿಕೊಳ್ಳಲಾಗಿದೆ. ಇದನ್ನು ಖಂಡಿತ ಪ್ರಶ್ನೆ ಮಾಡಬೇಕು’ ಎಂದು ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

ಸಿನಿಮೊಗೆ- ಶಿವಮೊಗ್ಗ ಚಿತ್ರ ಸಮಾಜ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಿಂದ ಶನಿವಾರ ಆಯೋಜಿಸಿದ್ದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಪ್ರದರ್ಶನ ಮತ್ತು ಅವಲೋಕನ- ಸಂವಾದ ಕಾರ್ಯಕ್ರಮ ಮತ್ತು ‘ಬಿಂಬ-ಬಿಂಬನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನಲ್ಲಿರುವ ದೌರ್ಬಲ್ಯ, ನೂನ್ಯತೆ ಹಾಗೂ ದೋಷಗಳನ್ನು ಬಂಡವಾಳವಾಗಿಸಿ ಸಿನಿಮಾಗಳನ್ನು ತೆರೆಯ ಮೇಲೆ ತರಬಾರದು. ಈ ರೀತಿಯ ಮಾರುಕಟ್ಟೆ ಸಂಸ್ಕೃತಿಯ ಬಗ್ಗೆ ವಿರೋಧವಿದೆ‌. ಒಂದು ಸಿನಿಮಾದ ದೃಶ್ಯ ಮೊದಲಿಗೆ ಅನುಭವ ಹುಟ್ಟಿಸುತ್ತದೆ. ನಂತರ ಅರ್ಥ ಹುಟ್ಟಿಸುತ್ತದೆ. ಆದರೆ, ಸಾಹಿತ್ಯ ಮೊದಲು ಅರ್ಥ  ಹುಟ್ಟಿಸಿದರೆ, ನಂತರ ಅನುಭವ ಹುಟ್ಟಿಸುತ್ತದೆ’ ಎಂದರು.

ADVERTISEMENT

ಸಿನಿಮಾ ಮಾಧ್ಯಮ ಸಂದೇಶವೊ? ವ್ಯಾಪಾರವೊ ಎಂದು ಬಿ.ಇಡಿ ವಿದ್ಯಾರ್ಥಿನಿ ಸಂಗೀತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಸರವಳ್ಳಿ, ‘ಸಿನಿಮಾ ಕ್ಷೇತ್ರ ಸಂದೇಶವೂ ಅಲ್ಲ. ವ್ಯಾಪಾರವೂ ಅಲ್ಲ. ಇಲ್ಲಿ ಕಲೆಯ ಉದ್ದೇಶ ಉಪದೇಶ ಅಲ್ಲ. ಸಿನಿಮಾದಲ್ಲಿ ನನಗೆ ತಿಳಿದಿರುವ ವಿಷಯ ಹಂಚಿಕೊಳ್ಳುತ್ತೇನೆ. ಇಲ್ಲಿ ಪ್ರೇಕ್ಷಕರನ್ನು ಹಾಗೂ ಪುಸ್ತಕ ಓದುಗರನ್ನು ದಡ್ಡ ಎನ್ನುವ ಭಾವನೆಯಲ್ಲಿ ಕಾಣಬಾರದು’ ಎಂದರು.

‘ಮುಂದಿನ ಪೀಳಿಗೆಗೆ ಏನು ಕೊಡುಗೆ ನೀಡಬೇಕು ಎನ್ನುವುದರ ಬಗ್ಗೆ ಚಿಂತನೆಗಳ ಅವಶ್ಯಕತೆ ಇದೆ. ಇಲ್ಲವಾದರೆ, ಯುವ ಪೀಳಿಗೆ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ವಿದ್ಯಾರ್ಥಿಗಳ ಯೋಚನಾ ಲಹರಿ ಅರಿಯಬೇಕು. ಇಲ್ಲವಾದರೆ, ನಮ್ಮಿಂದ ದೂರಾಗಲಿದ್ದಾರೆ’ ಎಂದು ವಿಧಾನ‌ಪರಿಷತ್ ಸದಸ್ಯ ಡಿ.ಎಸ್. ಅರುಣ್ ಕಳವಳ ವ್ಯಕ್ತಪಡಿಸಿದರು.

‘ಕಾಸರವಳ್ಳಿ ಅವರು ಶ್ರೇಷ್ಠ ನಿರ್ದೇಶಕರು. ಅವರೊಂದಿಗೆ ಮುಖಾಮುಖಿ ಮಾತನಾಡುವುದು ಅಪರೂಪದ ಸಂಗತಿ. ವಿನಯ ಪೂರ್ವ ವ್ಯಕ್ತಿತ್ವ ಹೊಂದಿದ ಅವರು, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ವ್ಯಕ್ತಿ ಅಲ್ಲ. ಎಲ್ಲರ ಅಭಿಪ್ರಾಯಕ್ಕೂ ಮನ್ನಣೆ ನೀಡುತ್ತಾರೆ’ ಎಂದು ರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ ಹೇಳಿದರು.

ಸಿನಿಮೊಗೆ- ಶಿವಮೊಗ್ಗ ಚಿತ್ರ ಸಮಾಜದ ಸಂಚಾಲಕ ಎಚ್.ಯು. ವೈದ್ಯನಾಥ್, ಗೋಪಾಲಕೃಷ್ಣ ಪೈ, ಪ್ರಾಚಾರ್ಯ ಕೆ. ಚಿದಾನಂದ, ಪ್ರಮುಖರಾದ ಜಿ.ವಿಜಯ್ ಕುಮಾರ್, ಹರೀಶ್ ಕಾರ್ನಿಕ್, ಹುಚ್ಚರಾಯಪ್ಪ ಇದ್ದರು.

‘ಕಲಾತ್ಮಕ ಚಿತ್ರ ಜನರಿಗೆ ತಲುಪಿಸುವಲ್ಲಿ ಸಮಸ್ಯೆ ಇದೆ’

ಕಲಾತ್ಮಕ ಚಿತ್ರಗಳು ಜನರನ್ನು ಮುಟ್ಟುವಲ್ಲಿ ಹಿಂದೆ ಉಳಿದಿವೆ ಏಕೆ ಎಂದು ವಿದ್ಯಾರ್ಥಿನಿ ರಶ್ಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಸರವಳ್ಳಿ ‘ಸಿನಿಮಾಗಳ ರಚನೆಯಲ್ಲಿ ಸಮಸ್ಯೆ ಇಲ್ಲ. ಅದನ್ನು ಜನರಿಗೆ ತಲುಪಿಸುವ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ. ಇಲ್ಲಿ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕಿದೆ. ಮೌಲ್ಯಾಧಾರಿತ ಶಿಕ್ಷಣ ಲಭಿಸಿದರೆ ಖಂಡಿತ ಎಲ್ಲಾ ವರ್ಗದವರಿಗೂ ಕಲಾತ್ಮಕ ಚಿತ್ರಗಳು ತಲುಪುತ್ತವೆ’ ಎಂದು ಅಭಿಪ್ರಾಯಪಟ್ಟರು. ‘ಸಿನಿಮಾ ಕಥೆಗೆ ನಾಲ್ಕಾರು ಮಜಲುಗಳಿರುತ್ತವೆ. ಅದು ಮನಸ್ಸನ್ನು ಕಲಕಬೇಕು. ಕಥೆ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆ ಹೇಳಬೇಕು. ಸಮಕಾಲಿಕ ಮತ್ತು ಸರ್ವಕಾಲಿಕವಾಗಿರಬೇಕು ಎನ್ನುವ ತುಡಿತ ಇರಬೇಕು. ಆಗ ಸಿನಿಮಾ ಎಲ್ಲಾ ವರ್ಗಕ್ಕೂ ತಲುಪುತ್ತದೆ. ಪ್ರೇಕ್ಷಕ ಚಿತ್ರವನ್ನು ಅನುಭವಿಸಬೇಕು. ಆಗ ನಮ್ಮ ಕೆಲಸಕ್ಕೆ ಬೆಲೆ ಸಿಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.