ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಸೋಮವಾರ ಅಳವಡಿಸಿದ್ದ ಫ್ಲೆಕ್ಸ್‌ಗಳು
ಶಿವಮೊಗ್ಗ: ಶಿವಮೊಗ್ಗದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ಈಚೆಗಷ್ಟೇ ತೆರವುಗೊಳಿಸಿ ಜನರ ಕಣ್ಣೊರೆಸುವ ತಂತ್ರ ಅನುಸರಿಸಿದ್ದ ಮಹಾನಗರ ಪಾಲಿಕೆ ಆಡಳಿತ, ಈಗ ಮತ್ತೆ ಜಾಣ ಕುರುಡು ಪ್ರದರ್ಶಿಸುತ್ತಿದೆ.
ಕಳೆದ ಒಂದು ವಾರದಿಂದ ಫ್ಲೆಕ್ಸ್ ಮುಕ್ತವಾಗಿದ್ದ ಶಿವಮೊಗ್ಗ ನಗರ ಈಗ ಮತ್ತೆ ಅದರ ಹಾವಳಿಗೆ ಕಂಗೆಟ್ಟಿದೆ. ರಾಜಕೀಯ ಪಕ್ಷಗಳ ಮುಖಂಡರು, ಜನ್ಮದಿನ, ಸಾವಿನ ಸಂತಾಪ, ಹೊಸ ಹೋಟೆಲ್, ಅಂಗಡಿ, ಶೋರೂಂ ಉದ್ಘಾಟನೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಚುನಾವಣೆ, ಆಯ್ಕೆಗೆ ಅಭಿನಂದನೆ, ಪ್ರದರ್ಶನ, ಮಾರಾಟದ ಮಾಹಿತಿ ಹೊತ್ತ ಫ್ಲೆಕ್ಸ್‌ಗಳು ಈಗ ನಗರದಲ್ಲಿ ಮತ್ತೆ ರಾರಾಜಿಸುತ್ತಿವೆ. ನಿಧಾನಕ್ಕೆ ವಾರದ ಹಿಂದಿನ ಸ್ಥಿತಿಯೇ ಸ್ಥಿರಗೊಳ್ಳುತ್ತಿದೆ.
ಶಿವಮೊಗ್ಗದ ಕುವೆಂಪು ರಸ್ತೆ, ಸಾಗರ ರಸ್ತೆಯ ಐ.ಬಿ. ಸರ್ಕಲ್, ವಿನೋಬ ನಗರದ ಡಬಲ್ ರಸ್ತೆ, ಗಾಂಧಿ ನಗರ, ದುರ್ಗಿಗುಡಿ, ಗಾಂಧಿ ಬಜಾರ್, ತಿಲಕ್ ನಗರದ ವಿವಿಧೆಡೆ ಈಗ ಮತ್ತೆ ಫ್ಲೆಕ್ಸ್ ಹಾವಳಿ ಗರಿಬಿಚ್ಚಿದೆ.
ಶಿವಮೊಗ್ಗದಲ್ಲಿ ಫ್ಲೆಕ್ಸ್ ಮಾಫಿಯಾದೊಂದಿಗೆ ಮಹಾನಗರ ಪಾಲಿಕೆಯ ಕೆಲವು ಅಧಿಕಾರಿ, ಸಿಬ್ಬಂದಿಗಳೇ ಕೈ ಜೋಡಿಸಿದ್ದಾರೆ. ಫ್ಲೆಕ್ಸ್ ತೆಗೆಸಿದರೆ 'ಮಾಮೂಲಿ' ಕೈತಪ್ಪಿ ಆದಾಯ ಕಡಿಮೆಯಾಗುವ ಭಯ ಅವರ ಜಾಣ ಮೌನಕ್ಕೆ ಕಾರಣ ಎಂದು ವಿನೋಬನಗರ ಪೊಲೀಸ್ ಚೌಕಿ ಸಮೀಪದ ನಿವಾಸಿ ನಿವೃತ್ತ ಶಿಕ್ಷಕ ವಿ.ಆರ್. ಜಗದೀಶಪ್ಪ ಆರೋಪಿಸುತ್ತಾರೆ.
‘ಪಾಲಿಕೆ ಆಯುಕ್ತರು ಉತ್ಸವಮೂರ್ತಿಯಂತೆ ಆಗಿದ್ದಾರೆ. ಕೆಳಹಂತದ ಅಧಿಕಾರಿ, ಸಿಬ್ಬಂದಿ ಮೇಲೆ ಅವರಿಗೆ ಹಿಡಿತವಿಲ್ಲವಾಗಿದೆ. ಫ್ಲೆಕ್ಸ್ ವಿಚಾರದಲ್ಲಿ ಹೈಕೋರ್ಟ್ ಆದೇಶ, ಲೋಕಾಯುಕ್ತರ ಸೂಚನೆಯನ್ನೂ ಅವರಿಗೆ ಪಾಲಿಸಲು ಆಗುತ್ತಿಲ್ಲ. ಸಾರ್ವಜನಿಕರು ದೂರಿದರೆ ಅಸಹಾಯಕತೆ ವ್ಯಕ್ತಪಡಿಸುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ ಅವರಿಗೆ ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ.
ಕಾಂಗ್ರೆಸ್‌ಗೊಂದು ಜನಸಾಮಾನ್ಯರಿಗೊಂದು ನ್ಯಾಯವೇ?
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದವರಿಗೊಂದು ಜನಸಾಮಾನ್ಯರಿಗೊಂದು ನ್ಯಾಯವೇ? ಎಂದು ದುರ್ಗಿಗುಡಿಯ ವ್ಯಾಪಾರಿ ರಾಘವೇಂದ್ರ ಸ್ವಾಮಿ ಪ್ರಶ್ನಿಸುತ್ತಾರೆ. ನಗರದ ಹೃದಯ ಭಾಗದಲ್ಲಿ ಈಗ ರಸ್ತೆಗಳ ಆಸುಪಾಸು ಕಾಂಗ್ರೆಸ್ ಪಕ್ಷದ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಅದಕ್ಕೆ ಪಾಲಿಕೆ ಆಡಳಿತ ಹೇಗೆ ಅನುಮತಿ ಕೊಟ್ಟಿದೆ. ಸಂಬಂಧಿಸಿದವರನ್ನು ಕೇಳಿದರೆ ರಾಜಕೀಯ ಒತ್ತಡ ಅನ್ನುತ್ತಾರೆ. ಜನಸಾಮಾನ್ಯರಿಗಾದರೆ ಹೈಕೋರ್ಟ್ ಆದೇಶ ಮನ್ನಣೆ ಪಡೆಯುತ್ತದೆ. ರಾಜಕೀಯ ಪಕ್ಷಗಳ ವಿಚಾರದಲ್ಲಿ ಅದು ಒತ್ತಡ ಆಗಿ ಬದಲಾಗುತ್ತದೆ. ಆಡಳಿತ ಪಕ್ಷದವರೇ ಹೀಗೆ ಮಾಡಿದರೆ ಹೇಗೆ? ಎಂದು ಅವರು ಪ್ರಶ್ನಿಸುತ್ತಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ಇದೇ ಫ್ಲೆಕ್ಸ್‌ಗಳು ಸಂದೇಶ ವಾಹಕವಾಗಿದ್ದವು. ಶಿವಮೊಗ್ಗದ ಹಿರಿಯ ರಾಜಕಾರಣಿಗಳ ರಾಜಕೀಯ ಭವಿಷ್ಯ ಮುಸುಕಾಗಲು ಈ ಫ್ಲೆಕ್ಸ್ ರಾಜಕಾರಣವೇ ವೇದಿಕೆ ಒದಗಿಸಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.
ಫ್ಲೆಕ್ಸ್ ನಾವೂ ವಿರೋಧಿಸುತ್ತೇವೆ: ಆರ್.ಪ್ರಸನ್ನಕುಮಾರ್
‘ಶಿವಮೊಗ್ಗದ ಯಾವುದೇ ಸ್ಥಳದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧಿಕೃತವಾಗಿ ಎಲ್ಲಿಯೂ ಒಂದೇ ಒಂದು ಫ್ಲೆಕ್ಸ್ ಅಳವಡಿಸಿಲ್ಲ. ಪಕ್ಷದ ಕಚೇರಿಯ ಕಾಂಪೌಂಡ್ ಒಳಗೆ ನಮ್ಮ ಖಾಸಗಿ ಜಾಗದಲ್ಲಿ ಮಾತ್ರ ಹಾಕಿಕೊಂಡಿದ್ದೇವೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳುತ್ತಾರೆ. ‘ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಹೈಕೋರ್ಟ್ ಆದೇಶ ಹಾಗೂ ಕಾನೂನನ್ನು ಗೌರವಿಸುತ್ತದೆ. ಪಕ್ಷದ ಮುಖಂಡರು ಫ್ಲೆಕ್ಸ್ ಹಾಕಿದ್ದು ಇನ್ನು ಮುಂದೆ ಹಾಕದಂತೆ ಅವರಿಗೂ ಕಿವಿಮಾತು ಹೇಳುತ್ತೇವೆ. ನಾವು (ಜಿಲ್ಲಾ ಕಾಂಗ್ರೆಸ್) ಫ್ಲೆಕ್ಸ್ ಹಾಕುವ ಸಂಪ್ರದಾಯಕ್ಕೆ ವಿರೋಧವಿದ್ದೇವೆ. ಫ್ಲೆಕ್ಸ್ ಅಳವಡಿಕೆ ಸಂಪ್ರದಾಯ ಸರಿಯಲ್ಲ. ಶಿವಮೊಗ್ಗ ನಗರದ ಆರೋಗ್ಯ ಕಾಪಾಡಲು ಪಾಲಿಕೆಯೊಂದಿಗೆ ಖಂಡಿತವಾಗಿಯೂ ಕೈ ಜೋಡಿಸುತ್ತೇವೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.