ಶಿವಮೊಗ್ಗ: ತುಂಗಭದ್ರಾ ನದಿಯ ಹರಿವಿನ ಉದ್ದಕ್ಕೂ ಎಲ್ಲಿಯೂ ಚರಂಡಿ ನೀರು ಶುದ್ಧೀಕರಣ ವ್ಯವಸ್ಥೆ ಇಲ್ಲ. ಎಲ್ಲ ಕಡೆಯೂ ನದಿಗೆ ನೇರವಾಗಿ ಕೊಳಚೆ ನೀರು ಹರಿದುಬಿಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ತುಂಗಭದ್ರೆ ಬೆಂಗಳೂರಿನ ವೃಷಭಾವತಿ ನದಿಯಂತೆ ಮತ್ತೊಂದು ದೊಡ್ಡ ಚರಂಡಿ ಆಗ ಮಾರ್ಪಡಲಿದೆ. ಇದು ಈ ಕಾಲದ ಭೀಕರ ದುರಂತ ಎಂದು ನಿರ್ಮಲ ತುಂಗಭದ್ರಾ ಅಭಿಯಾನ ಸಂಘಟನೆ ಎಚ್ಚರಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕಿಷ್ಕಿಂದೆಯವರೆಗಿನ 430 ಕಿ.ಮೀ ಹಾದಿಯಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭ ಕಾಣಸಿಕ್ಕ ಸಮಸ್ಯೆ, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಿ ಸಿದ್ಧಪಡಿಸಿದ ಸಮೀಕ್ಷಾ ವರದಿಯನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ಪ್ರೊ.ಬಿ.ಎಂ.ಕುಮಾರಸ್ವಾಮಿ ಬಿಡುಗಡೆಗೊಳಿಸಿದರು. ಈ ವೇಳೆ ತುಂಗಭದ್ರೆಯ ಒಡಲಿನ ಸಂಕಟಗಳನ್ನು ಹಂಚಿಕೊಂಡರು.
ತುಂಗಭದ್ರಾ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಹೇರಳವಾಗಿ ಕಂಡು ಬಂದಿದೆ. ಜಲಾನಯನ ಪ್ರದೇಶದಲ್ಲಿ ಅರಣ್ಯನಾಶ ವ್ಯಾಪಕವಾಗಿದೆ. ಶೃಂಗೇರಿಯಿಂದ ಹರಿಹರದವರೆಗೆ ಭತ್ತದ ಕೃಷಿ ಹೆಚ್ಚಿದ್ದು, ಅಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕ ನೇರವಾಗಿ ನದಿಯ ಒಡಲು ಸೇರುತ್ತಿವೆ. ಹರಿಹರದ ಬಳಿ ಬೃಹತ್ ಕೈಗಾರಿಕೆಯ ತ್ಯಾಜ್ಯವೂ ನದಿ ಸೇರಿ, ಕಲುಷಿತಗೊಳಿಸಿದೆ. ಇದರಿಂದ ತುಂಗಭದ್ರೆಯ ನೀರು ಕುಡಿಯಲು ಅಲ್ಲ ಬಳಸಲೂ ಯೋಗ್ಯವಾಗಿಲ್ಲ. ಇದನ್ನು ಸಂಶೋಧನಾ ವರದಿಯೇ ಹೇಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಿರ್ಮಲ ತುಂಗಾ ಅಭಿಯಾನದ ಪಾದಯಾತ್ರೆಯು ನದಿಪಾತ್ರದ ಏಳು ಜಿಲ್ಲೆ, 13 ತಾಲ್ಲೂಕು ಹಾಗೂ 120ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಎರಡು ಹಂತಗಳಲ್ಲಿ ಸಾಗಿ, ಒಟ್ಟು 22 ದಿನಗಳಲ್ಲಿ ಸುಮಾರು 430 ಕಿ.ಮೀ ದೂರ ಕ್ರಮಿಸಿದೆ. ಜಲಜಾಗೃತಿ ವಿಚಾರದಲ್ಲಿ ಇದೊಂದು ದಾಖಲೆ ಎಂದರು.
ಪಾದಯಾತ್ರೆಯಲ್ಲಿ 35 ಸಣ್ಣ ಸಭೆ, 15ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳ ಆಯೋಜಿಸಿ, ನದಿ ಪಾತ್ರದ ಜನರಲ್ಲಿ ಜಲಜಾಗೃತಿ ಉಂಟು ಮಾಡುವ ಜೊತೆಗೆ ನದಿಯ ಸಂರಕ್ಷಣೆ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ ಎಂದರು.
ಪಾದಯಾತ್ರೆಯಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 250 ಪರಿಸರ ಸಂಘಟನೆಗಳು, 30 ಮಠ-ಮಂದಿರಗಳು, ರೈತರು, ಸಾಧು–ಸಂತರು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರ್ಯಾವರಣ ಟ್ರಸ್ಟಿನ ಗಿರೀಶ್ ಪಟೇಲ್, ಎಂ. ಶಂಕರ್, ರಮೇಶ್ ಹೆಗ್ಡೆ, ದಿನೇಶ್ ಎಸ್.ಪಿ., ಕಿರಣ್ ಕೆ., ಬಾಲಕೃಷ್ಣ ನಾಯ್ಡು, ತ್ಯಾಗರಾಜ್ ಮಿತ್ಯಾಂತ ಇದ್ದರು.
ಮೂಳೆ ಸಾಂದ್ರತೆಯ ರೋಗ ಹೆಚ್ಚಳ: ಶ್ರೀಪತಿ ತುಂಗಭದ್ರಾ ನದಿ ನೀರಿನಲ್ಲಿ ಅಲ್ಯೂಮಿನಿಯಂ ಅಂಶ ಅಪಾಯಕಾರಿ ಮಟ್ಟದಲ್ಲಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯೇ ಹೇಳಿದೆ. ಈ ನೀರಿನ ಸೇವನೆಯಿಂದ ಮೂಳೆಸಾಂದ್ರತೆಯ ರೋಗ ಹೆಚ್ಚಳವಾಗುತ್ತಿದೆ ಎಂದು ಪರಿಸರ ತಜ್ಞ ಡಾ.ಎಲ್.ಕೆ. ಶ್ರೀಪತಿ ಹೇಳಿದರು. ನದಿ ನೀರಿನಲ್ಲಿ ಅಲ್ಯೂಮಿನಿಯಂ ಅಂಶದ ಬಗ್ಗೆ ಇನ್ನಷ್ಟು ಪರೀಕ್ಷೆ ಆಗಬೇಕು. ಕೊಪ್ಪಳದ ಉಳೇನೂರಿನಲ್ಲಿ ಇಕೋಲೈ ಎಂಬ ವಿಷಕಾರಿ ಅಂಶ ಕಂಡು ಬಂದಿದೆ. ಅದು ಜಾನುವಾರುಗಳು ಕೂಡ ಕುಡಿಯಲು ಯೋಗ್ಯವಲ್ಲ. ನದಿ ನೀರಿನಲ್ಲಿ ಆಮ್ಲಜನಕದ ಕೊರತೆಯು ಹೆಚ್ಚಿದೆ. ನದಿಯ ಸಂರಕ್ಷಣೆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ತಾಲ್ಲೂಕಿನಲ್ಲೂ ಜಲಜಾಗೃತಿ ಸಮಿತಿ ರಚಿಸಿ ಅವುಗಳಿಗೆ ತಾಂತ್ರಿಕ ಸಹಾಯ ನೀಡಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು. ತುಂಗಭದ್ರಾ ನದಿ ದಂಡೆಯ ಹಗರಿಬೊಮ್ಮನಹಳ್ಳಿ ಮರಿಯಮ್ಮನಹಳ್ಳಿ ಹೊಸಪೇಟೆ ಗಂಗಾವತಿ ಪಟ್ಟಣಗಳಲ್ಲಿ ಘನತ್ಯಾಜ್ಯ ವಿಲೇವಾರಿ ಅವೈಜ್ಞಾನಿಕವಾಗಿದೆ. ಜನರಲ್ಲೂ ಜಾಗೃತಿ ಕಡಿಮೆ ಇದೆ. ನದಿ ಮಾಲಿನ್ಯದಿಂದ ಎದುರಾಗುವ ದೀರ್ಘಕಾಲಿನ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ಪುಣ್ಯಕ್ಷೇತ್ರಗಳಲ್ಲಿ ನದಿಯ ಸುರಕ್ಷೆ; ಎಚ್ಚರವಹಿಸಿ ಹಂಪಿ ಹುಲಿಗಿಯ ಹುಲಿಗೆಮ್ಮ ದೇವಸ್ಥಾನ ಶಿವಾಪುರದ ಮಾರ್ಕಂಡೇಯ ದೇವಸ್ಥಾನ ಋಷಿಮುಖ ಪರ್ವತ ಆನೆಗೊಂದಿ ಪಂಪಾ ಸರೋವರ ನವಬೃಂದಾವನಕ್ಕೆ ನಿತ್ಯ ಬರುವ ಭಕ್ತರು ಪುಣ್ಯ ಸ್ನಾನಕ್ಕೆ ಸೋಪು ಶಾಂಪೂ ಬಳಸುತ್ತಾರೆ. ಅದೂ ನದಿಯನ್ನು ಕಲುಷಿತ ಮಾಡುತ್ತಿದೆ. ಅಂಜನಾದ್ರಿಯ ಹನುಮ ಮಾಲಾಧಾರಿಗಳು ಬಟ್ಟೆಗಳನ್ನು ನದಿಯಲ್ಲಿ ಬಿಸಾಡುವುದರಿಂದ ತುಂಗಭದ್ರಾ ನದಿ ಮಲಿನವಾಗುತ್ತಿದೆ. ಈ ಎಲ್ಲ ಪುಣ್ಯ ಕ್ಷೇತ್ರಗಳಲ್ಲಿ ನದಿಯ ಸುರಕ್ಷತೆ ಬಗ್ಗೆ ಎಚ್ಚರವಹಿಸಬೇಕು ಎಂದು ಪ್ರೊ.ಬಿ.ಎಂ.ಕುಮಾರಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.