ADVERTISEMENT

ಬಡವರಿಗೆ ಬಟ್ಟೆ: ಚರಕದ ಕಾಳಜಿ ಕಾರ್ಯಕ್ರಮ

ಕೊರೊನಾ ಸಂಕಷ್ಟದಲ್ಲೂ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ

ರವಿ ನಾಗರಕೊಡಿಗೆ
Published 10 ಸೆಪ್ಟೆಂಬರ್ 2020, 2:44 IST
Last Updated 10 ಸೆಪ್ಟೆಂಬರ್ 2020, 2:44 IST
ಹೊಸನಗರ ತಾಲ್ಲೂಕು ಮುತ್ತಲ ಗ್ರಾಮದಲ್ಲಿ ಚರಕ ಸಂಸ್ಥೆಯು ದೇಸಿ ಬಟ್ಟೆಗಳನ್ನು ಬಡವರಿಗೆ ಉಚಿತವಾಗಿ ವಿತರಿಸಿತು
ಹೊಸನಗರ ತಾಲ್ಲೂಕು ಮುತ್ತಲ ಗ್ರಾಮದಲ್ಲಿ ಚರಕ ಸಂಸ್ಥೆಯು ದೇಸಿ ಬಟ್ಟೆಗಳನ್ನು ಬಡವರಿಗೆ ಉಚಿತವಾಗಿ ವಿತರಿಸಿತು   

ಹೊಸನಗರ: ದೇಸಿ ಕೈಮಗ್ಗ ನೇಯ್ಗೆಯಲ್ಲಿ ಹೊಸ ಕ್ರಾಂತಿ ಮಾಡಿರುವ, ಗ್ರಾಮೀಣ ಬದುಕಿನ ಸ್ವಾವಲಂಬನೆಗೆ ಹೆಸರಾದ ಸಾಗರ ತಾಲ್ಲೂಕಿನ ಚರಕ ಸಂಸ್ಥೆ ತನ್ನ ದಾಸ್ತಾನಿನಲ್ಲಿದ್ದ ಹಳೆಯ ಮತ್ತು ಮಾರಾಟವಾಗದೇ ಉಳಿದಿರುವ ದೇಸಿ ಕೈಮಗ್ಗದ ಬಟ್ಟೆಗಳನ್ನು ಬಡವರಿಗೆ ಹಂಚುವ ಮೂಲಕ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕೊರೊನಾ ಕಾರಣ ಚರಕ ಸಂಸ್ಥೆಯು ಉತ್ಪಾದನೆ ಮತ್ತು ಮಾರಾಟದಲ್ಲಿ ತೀವ್ರ ಸಮಸ್ಯೆ ಎದುರಿಸುತ್ತಿದೆ. ಸಂಸ್ಥೆಯಲ್ಲಿ ದಾಸ್ತಾನಿರುವ ಬಟ್ಟೆಗಳನ್ನು ಬಡವರಿಗೆ ಹಂಚಿ ನೆರವಾಗಲು ಮುಂದಾಗಿದೆ.

ತಾಲ್ಲೂಕಿನ ಮುತ್ತಲ ಗ್ರಾಮದಲ್ಲಿ ಸಾರಾ ಸಂಸ್ಥೆ ಮತ್ತು ಸ್ವಗ್ರಾಮ ಯೋಜನೆಯ ಕಾರ್ಯಕರ್ತರೊಂದಿಗೆ ಗ್ರಾಮದ ಸುತ್ತಲಿನ ಬಡ ಜನರಿಗೆ ಉಚಿತವಾಗಿ ಬಟ್ಟೆಗಳನ್ನು ವಿತರಿಸಿದೆ.

ADVERTISEMENT

ಕೊರೊನಾ ಕಾರಣ ದೇಸಿ ವಸ್ತ್ರಗಳ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿಲ್ಲ. ಅಲ್ಲದೆ ಮಾರಾಟ ಮಾಡುವಲ್ಲಿ ಅವಕಾಶ ಇಲ್ಲದಿರುವ ಈ ವೇಳೆಯಲ್ಲಿ ದಾಸ್ತಾನಿನಲ್ಲಿದ್ದ ಗುಣಮಟ್ಟದ ಬಟ್ಟೆಗಳನ್ನು ಬಡವರಿಗೆ ಹಂಚಿ ಹೊಸ ಬಗೆಯ ಪ್ರತಿಭಟನೆಗೆ ನಾಂದಿ ಹಾಡಿದೆ.

ಆರ್ಥಿಕ ಸಮಸ್ಯೆಯಲ್ಲಿರುವ ಸಂಸ್ಥೆ ಜನರಿಗೆ ದೇಸಿ ವಸ್ತ್ರಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಾಳಜಿ ‍ಪ್ರದರ್ಶಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಚರಕ ಸಂಸ್ಥೆಯ ಕಾರ್ಯದರ್ಶಿ ಪ್ರತಿಭಾ, ನಿರ್ದೇಶಕ ಮಂಡಲಿ ಸದಸ್ಯರಾದ ಮಹಾಲಕ್ಷ್ಮಿ, ಪವಿತ್ರ, ಸಾರ ಸಂಸ್ಥೆ ಹಾಗೂ ಸ್ವಗ್ರಾಮ ಯೋಜನೆಯ ಸಂಚಾಲಕ, ಚಲನಚಿತ್ರ ನಟ ಯೇಸು ಪ್ರಕಾಶ್, ಧನುಷ್, ಸ್ಥಳೀಯ ಸ್ವಗ್ರಾಮ ಸಮಿತಿಯ ಗುರುಮೂರ್ತಿ, ರಮೇಶ್, ಸತೀಶ್, ರಾಜಶೇಖರ್, ಕೃಷ್ಣಪ್ಪಇದ್ದರು.

ಕಾರ್ಯಕ್ರಮದ ನಂತರ ಸ್ವಗ್ರಾಮ ಯೋಜನೆ ಅಡಿಯಲ್ಲಿ ಮುತ್ತಲ ಗ್ರಾಮದಲ್ಲಿ ಪುನರುಜ್ಜೀವನ ಮಾಡಲಾದ ಎರಡು ಕೆರೆಗಳನ್ನು ಚರಕ ಸಂಸ್ಥೆಯ ಸದಸ್ಯರು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.