ADVERTISEMENT

ಸಿಎಂಗೆ ‘ನಮ್ಮೊಲುಮೆಯ ಭಾವಾಭಿನಂದನೆ’ ಇಂದು

‘ರಾಜಕಾರಣದ ತ್ರಿವಿಕ್ರಮ’ ಪುಸ್ತಕ ಬಿಡುಗಡೆ, 40 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:45 IST
Last Updated 28 ಫೆಬ್ರುವರಿ 2021, 5:45 IST
ಶಿವಮೊಗ್ಗ ನಗರದ ಹಳೇ ಜೈಲು ಆವರಣದಲ್ಲಿ ಫೆ.28ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಮ್ಮೊಲುಮೆಯ ಭಾವಾಭಿನಂದನೆ ಕಾರ್ಯಕ್ರಮಕ್ಕೆ ಸಿದ್ದಗೊಂಡಿರುವ ವೇದಿಕೆ.
ಶಿವಮೊಗ್ಗ ನಗರದ ಹಳೇ ಜೈಲು ಆವರಣದಲ್ಲಿ ಫೆ.28ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಮ್ಮೊಲುಮೆಯ ಭಾವಾಭಿನಂದನೆ ಕಾರ್ಯಕ್ರಮಕ್ಕೆ ಸಿದ್ದಗೊಂಡಿರುವ ವೇದಿಕೆ.   

ಶಿವಮೊಗ್ಗ: ನಗರದ ಹಳೇ ಜೈಲು ಆವರಣದಲ್ಲಿ ಫೆ. 28ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನಾಚರಣೆ ನಿಮಿತ್ತ ‘ನಮ್ಮೊಲುಮೆಯ ಭಾವಾಭಿನಂದನೆ ಕಾರ್ಯಕ್ರಮ ನಡೆಯಲಿದ್ದು, ನಗರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

40 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.

ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸಚಿವ ಕೆ.ಎಸ್. ಈಶ್ವರಪ್ಪ ಅವರು ‘ರಾಜಕಾರಣದ ತ್ರಿವಿಕ್ರಮ’ ಪುಸ್ತಕ ಬಿಡುಗಡೆ ಮಾಡುವರು.

ADVERTISEMENT

ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಕುಮಾರ್‌ ಬಂಗಾರಪ್ಪ, ಕೆ.ಬಿ. ಅಶೋಕ್‍ ನಾಯ್ಕ್‌, ಆಯನೂರು ಮಂಜುನಾಥ್, ಭಾರತಿ ಶೆಟ್ಟಿ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್‌ 1 ರಂದು ಸಂಜೆ 6ಕ್ಕೆ ಇದೇ ಸ್ಥಳದಲ್ಲಿ ಆಳ್ವಾಸ್ ನುಡಿಸಿರಿ ತಂಡದವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದ್ದು, 250 ಕಲಾವಿದರು ಭಾಗವಹಿಸುವರು. ಸಂಸದ ಬಿ.ವೈ. ರಾಘವೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಡಾ.ಮೋಹನ್ ಆಳ್ವಾ ಅಧ್ಯಕ್ಷತೆ ವಹಿಸುವರು.

ಇಂದು ಶಿವಮೊಗ್ಗಕ್ಕೆ ಸಿಎಂ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಫೆ. 28ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಬೆಳಿಗ್ಗೆ 10.55ಕ್ಕೆ ಸೊರಬಕ್ಕೆ ಬರಲಿದ್ದಾರೆ. ಬೆಳಿಗ್ಗೆ 11ಕ್ಕೆ ಆನವಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೊರಬ ತಾಲ್ಲೂಕಿನ ಮೂಗೂರು ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 1.15ಕ್ಕೆ ಸೊರಬದಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುವ ಅವರು ಸಂಜೆ 5.30ಕ್ಕೆ ನಗರದ ಆಲ್ಕೊಳ ಸರ್ಕಲ್ ಹತ್ತಿರದ ಗೋಪಾಲಗೌಡ ಬಡಾವಣೆಯಲ್ಲಿರು ಮೆಡಿಕಲ್ ಶಾಪ್ ಅಸೋಸಿಯೇಷನ್‌ನವರ ಔಷಧ ಭವನ ಉದ್ಘಾಟನೆ ನೆರವೇರಿಸುವರು. ಸಂಜೆ 6ಕ್ಕೆ ನಗರದ ಹಳೇ ಜೈಲು ಆವರಣದಲ್ಲಿ ಜಿಲ್ಲಾಡಳಿತ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಉಪಯುಕ್ತತಾ ಸ್ಥಳದ ಅಭಿವೃದ್ಧಿಯ ಭಾಗಶಃ ಅನುಷ್ಠಾನ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 6.30ಕ್ಕೆ ಹಳೇ ಜೈಲು ಆವರಣದಲ್ಲಿ ಆಯೋಜಿಸಿರುವ ಮುಖ್ಯಮಂತ್ರಿಯವರಿಗೆ ‘ನಮ್ಮೊಲುಮೆ’ ಅಭಿಮಾನದ ಅಭಿನಂದನಾ ಸಮಾರಂಭದಲ್ಲಿಪಾಲ್ಗೊಳ್ಳುವರು.

ಅಂದು ಶಿವಮೊಗ್ಗದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಮಾರ್ಚ್‌ 1 ರಂದು ಬೆಳಿಗ್ಗೆ 9ಕ್ಕೆ ನಗರದ ವಿನೋಬನಗರ ಗೆಜ್ಜೆನಹಳ್ಳಿ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 9.15 ಶಿವಮೊಗ್ಗ ಮಹಾನಗರ ಪಾಲಿಕೆಯ ಹತ್ತಿರ ಎನ್.ಡಿ.ವಿ.ಹಾಸ್ಟೆಲ್ ಕಟ್ಟಡ ನಿರ್ಮಣಕ್ಕೆ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.