ADVERTISEMENT

ಕೋಮು ಸಂಘರ್ಷ: ಶಿರಾಳಕೊಪ್ಪ ಸ್ತಬ್ಧ, ಪಟ್ಟಣದಲ್ಲಿ ಅಘೋಷಿತ ಬಂದ್‌ ಸ್ಥಿತಿ

ಅಂಗಡಿಗಳನ್ನು ಮುಚ್ಚಿದ ವ್ಯಾಪಾರಿಗಳು; ಪಟ್ಟಣದಲ್ಲಿ ಅಘೋಷಿತ ಬಂದ್‌ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 3:04 IST
Last Updated 23 ಆಗಸ್ಟ್ 2022, 3:04 IST
ಶಿರಾಳಕೊಪ್ಪದಲ್ಲಿ ನಡೆದ ಕೋಮು ಸಂಘರ್ಷದಿಂದ ಪಟ್ಟಣದಲ್ಲಿ ಸೋಮವಾರ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.
ಶಿರಾಳಕೊಪ್ಪದಲ್ಲಿ ನಡೆದ ಕೋಮು ಸಂಘರ್ಷದಿಂದ ಪಟ್ಟಣದಲ್ಲಿ ಸೋಮವಾರ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.   

ಶಿರಾಳಕೊಪ್ಪ: ಪಟ್ಟಣದಲ್ಲಿ ಸೋಮವಾರ ಇಬ್ಬರು ಯುವಕರ ಮಧ್ಯೆ ಆರಂಭವಾದ ಜಗಳ ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಆಸ್ಪದ ಮಾಡಿಕೊಟ್ಟಿತು. ಘಟನೆ ಹಿನ್ನೆಲೆಯಲ್ಲಿ ವ್ಯಾಪಾರ– ವಹಿವಾಟು ಸ್ಥಗಿತಗೊಂಡ ಪರಿಣಾಮ ಪಟ್ಟಣದಲ್ಲಿ ಅಘೋಷಿತ ಬಂದ್‌ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಸೊರಬ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಮಂಚಿಕೊಪ್ಪ ವಲಯ ಮಟ್ಟದ ಕ್ರೀಡಾಕೂಟ ನಡೆಯುತ್ತಿತ್ತು. ಕ್ರೀಡಾಕೂಟ ನೋಡಲು ಬಂದಿದ್ದ ಇಬ್ಬರು ಯುವಕರು ಗಲಾಟೆ ಮಾಡಿಕೊಂಡಿದ್ದು, ಅವರನ್ನು ಕ್ರೀಡಾಂಗಣದಿಂದ ಹೊರಗಡೆ ಕಳುಹಿಸಲಾಗಿತ್ತು.

ನಂತರ ಅವರು ಹತ್ತಿರದ ಮಂಚಿಕೊಪ್ಪ ಗ್ರಾಮಕ್ಕೆ ತೆರಳುತ್ತಿರುವಾಗ ಹಿರೇಕೆರೂರು ರಸ್ತೆಯಲ್ಲಿ ಬೇರೆ ಕೋಮಿನ ಯುವಕರ ತಂಡ ಅಡ್ಡಗಟ್ಟಿ ಹಲ್ಲೆ ಮಾಡಿದೆ. ಇದರಲ್ಲಿ ಮಂಚಿಕೊಪ್ಪ ಗ್ರಾಮದ 6 ಯುವಕರು ಗಾಯಗೊಂಡಿದ್ದು, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ನಡೆದ ಬಳಿಕ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿನ ವ್ಯಾಪಾರ– ವಹಿವಾಟು ಸ್ಥಗಿತ
ಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಡಿವೈಎಸ್‌ಪಿ ಶಿವಾನಂದ್ ಮದರಖಂಡಿ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜಿಲ್ಲಾ ಮೀಸಲು ಪೊಲೀಸ್ ಪಡೆಯ ಎರಡು ತುಕಡಿ ಹಾಗೂ ಆನವಟ್ಟಿ, ಸೊರಬ, ಶಿಕಾರಿಪುರದ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.