ADVERTISEMENT

ಕೈಗಾರಿಕೋದ್ಯಮಿಯಾಗಲು ಪೂರಕ ವಾತಾವರಣ- ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 7 ಮೇ 2022, 3:13 IST
Last Updated 7 ಮೇ 2022, 3:13 IST
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೊಸ ಕೈಗಾರಿಕಾ ನೀತಿ 2020-–25 ಅರಿವು ಮೂಡಿಸುವ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್‌ ಉದ್ಘಾಟಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೊಸ ಕೈಗಾರಿಕಾ ನೀತಿ 2020-–25 ಅರಿವು ಮೂಡಿಸುವ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್‌ ಉದ್ಘಾಟಿಸಿದರು.   

ಶಿವಮೊಗ್ಗ: ಕೈಗಾರಿಕೋದ್ಯಮಿಯಾಗಲು ಅವಶ್ಯ ನೆರವು ಮತ್ತು ಮಾರ್ಗದರ್ಶನ ನೀಡಿ ಕೈಹಿಡಿಯುವ ವಾತಾವರಣ ಸೃಷ್ಟಿಯಾಗಿದ್ದು, ಯುವ ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದಲ್ಲಿ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಹಮ್ಮಿಕೊಂಡಿದ್ದ ಹೊಸ ಕೈಗಾರಿಕಾ ನೀತಿ 2020-25 ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕೋದ್ಯಮಿಯಾಗಲು ಹಿಂದೆ ಇದ್ದಂತಹ ಕಷ್ಟ ಮತ್ತು ಮಾರ್ಗದರ್ಶನ ಕೊರತೆ ಎರಡೂ ಈಗ ಇಲ್ಲ. ಮೊದಲು ಉದ್ಯಮ ಆರಂಭಿಸುವುದು ಹುಲಿ ಸವಾರಿ ಮಾಡಿದಷ್ಟು ಸವಾಲಿನ ಕೆಲಸವಾಗಿತ್ತು. ಆದರೆ, ಈಗ ವ್ಯವಸ್ಥೆ ಬದಲಾಗುತ್ತಿದೆ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ‘ಯಾವುದೇ ಹೊಸ ಕೈಗಾರಿಕಾ ನೀತಿ ಜಾರಿಗೆ ಮುನ್ನ ಪ್ರಮುಖ ಅಂಶಗಳ ಕುರಿತು ಸರ್ಕಾರದ ಗಮನಕ್ಕೆ ತರಲು ಕೈಗಾರಿಕೋದ್ಯಮಿಗಳು ಚರ್ಚಿಸಬೇಕು’ ಎಂದು ಹೇಳಿದರು.

ಹೊಸ ಕೈಗಾರಿಕಾ ನೀತಿಯು ₹ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸುವ, ₹ 20 ಲಕ್ಷ ಜನರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿದ್ದು, ಕೈಗಾರಿಕೆಗಳು ಬೆಂಗಳೂರಿಗೆ ಹೆಚ್ಚು ಕೇಂದ್ರೀಕೃತವಾಗದೆ ವಿಕೇಂದ್ರೀಕೃತವಾಗಬೇಕು ಎಂದರು.

ಕೆಎಸ್‍ಎಸ್‍ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿ, ‘ನಮ್ಮ ದೇಶದ ಜಿಡಿಪಿ ಹೆಚ್ಚಿಸುವ ಶಕ್ತಿ ಕೈಗಾರಿಕೆಗಳಿಗೆ ಇದೆ. ಪ್ರಸ್ತುತ ಕೈಗಾರಿಗಳನ್ನು ಪ್ರೋತ್ಸಾಹಿಸಲು, ಸಹಾಯಹಸ್ತ ನೀಡಲು ಸರ್ಕಾರದ ವಿವಿಧ ಸಂಸ್ಥೆಗಳಿವೆ. ಪ್ರತಿ ಜಿಲ್ಲೆಗಳನ್ನು ಕ್ಲಸ್ಟರ್‌ಗಳಾಗಿ ಗುರುತಿಸಲಾಗಿದ್ದು, ಜಿಲ್ಲಾವಾರು ಕೈಗಾರಿಕೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡರು ಮಾತನಾಡಿ, ‘ಉದ್ದಿಮೆ ಯಶಸ್ಸಿಗೆ ನುರಿತ ತಂಡ ಅಗತ್ಯ. ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿ ತೊಡಗಿಸಿಕೊಂಡಲ್ಲಿ ಉದ್ದಿಮೆಯಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಸಲಹೆ ನೀಡಿದರು.

ಇಂಡಸ್ಟ್ರಿಯಲ್ ಕಮಿಟಿಯ ಮುಖ್ಯಸ್ಥ ಎಂ.ರಾಜು, ಟೆಕ್ಸಾಕ್‍ನ ಸಿಇಒ ರಮಾನಂದ ನಾಯಕ್ ಮಾತನಾಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧೀಕ್ಷಕ ಎಚ್.ಎಂ. ಶ್ರೀನಿವಾಸ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ, ಕೈಗಾರಿಕೋದ್ಯಮಿಗಳ ಸಂಘಗಳ ಅಧ್ಯಕ್ಷ ರಮೇಶ್ ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.