
ಸಾಗರ: ಕೇಂದ್ರ ಸರ್ಕಾರ ಉದ್ಯೋಗಖಾತ್ರಿ ಯೋಜನೆ ಸ್ವರೂಪ ಬದಲಿಸಿರುವುದನ್ನು ವಿರೋಧಿಸಿ ಸೋಮವಾರ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಆವರಣದಲ್ಲಿರುವ ಗಾಂಧೀಜಿ, ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಮಹಾತ್ಮಾ ಗಾಂಧಿ ಹೆಸರಿನಲ್ಲಿದ್ದ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಹೆಸರನ್ನು ತೆಗೆದು ವಿಬಿ ಜಿ ರಾಮ್ ಜೀ ಎಂಬ ಹೆಸರನ್ನು ಕೇಂದ್ರ ಸರ್ಕಾರ ಇಟ್ಟಿದೆ. ಇದು ಗಾಂಧೀಜಿ ಅವರಿಗೆ ಕೇಂದ್ರ ಸರ್ಕಾರ ಮಾಡಿರುವ ಅವಮಾನವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ದೂರಿದರು.
ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಮಾತ್ರ ಬದಲಿಸಿಲ್ಲ. ಜೊತೆಗೆ ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆಂಬ ಈ ಯೋಜನೆಯ ಉದ್ದೇಶವನ್ನೆ ಕೇಂದ್ರ ಸರ್ಕಾರ ಬುಡಮೇಲು ಮಾಡಿದೆ. ನಿಧಾನವಾಗಿ ಯೋಜನೆಯನ್ನು ಕೊಲ್ಲಬೇಕು ಎಂಬ ಹುನ್ನಾರ ಕೇಂದ್ರ ಸರ್ಕಾರದಿಂದ ನಡೆದಿದೆ ಎಂದು ಅವರು ಟೀಕಿಸಿದರು.
ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಅಪಾಯ ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎನ್ನುವ ಕಾರಣಕ್ಕೆ ಅನುದಾನ ನೀಡುವ ವಿಷಯದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದನ್ನು ನೋಡಿಯೂ ರಾಜ್ಯದ ಬಿಜೆಪಿ ಸಂಸದರು ಮೌನ ವಹಿಸುವ ಮೂಲಕ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಪ್ರಮುಖರಾದ ಬಿ.ಆರ್.ಜಯಂತ್, , ಕಲಸೆ ಚಂದ್ರಪ್ಪ, ಸುರೇಶ್ ಬಾಬು, ಅನಿತಾಕುಮಾರಿ, ಬಿ.ಎ.ಇಂದೂಧರ, ಕೆ.ಎಂ.ಸೂರ್ಯನಾರಾಯಣ, ಗಣಪತಿ ಮಂಡಗಳಲೆ, ಸೋಮಶೇಖರ್ ಲ್ಯಾವಿಗೆರೆ, ಮಧುಮಾಲತಿ, ಉಷಾ ಎನ್. ಪ್ರಭಾವತಿ ಚಂದ್ರಕಾಂತ್, ಚಂದ್ರಮೌಳಿ, ಸದ್ದಾಂ,ಅಶೋಕ್ ಬೇಳೂರು, ಸೈಯದ್ ಅನ್ವರ್ , ಭವ್ಯ ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.