ADVERTISEMENT

ದಲಿತ ನಾಯಕತ್ವವನ್ನು ಮುಗಿಸುವ ಸಂಚು: ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 13:25 IST
Last Updated 14 ಅಕ್ಟೋಬರ್ 2019, 13:25 IST
ತೀರ್ಥಹಳ್ಳಿ ತಾಲ್ಲೂಕು ಕಚೇರಿ ಎದುರು ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿದರು
ತೀರ್ಥಹಳ್ಳಿ ತಾಲ್ಲೂಕು ಕಚೇರಿ ಎದುರು ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿದರು   

ತೀರ್ಥಹಳ್ಳಿ: ಬಿಜೆಪಿ ದೇಶದಲ್ಲಿ ದಲಿತ ನಾಯಕತ್ವವನ್ನು ರಾಜಕೀಯವಾಗಿ ಮುಗಿಸುವ ಸಂಚು ರೂಪಿಸಿದೆ. ಗಾಂಧೀಜಿ, ಅಂಬೇಡ್ಕರ್ ಅವರನ್ನು ಜನರ ಅನುಕಂಪ ಗಳಿಸುವುದಕ್ಕಾಗಿ ಮಾತ್ರ ಹೊಗಳುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.

ಬಿಜೆಪಿಯ ದ್ವೇಷ ರಾಜಕಾರಣ ಖಂಡಿಸಿ ಸೋಮವಾರ ತಾಲ್ಲೂಕು ಕಚೇರಿ ಎದುರು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಗಾಂಧೀಜಿ ಅವರನ್ನು ಕೊಂದವರು ಗಾಂಧೀಜಿ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿರುವುದು ವಿಪರ್ಯಾಸ’ ಎಂದರು.

ಬಿಜೆಪಿ ವಿರೋಧ ಪಕ್ಷಗಳ ಮೇಲೆ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ವಿರೋಧಪಕ್ಷಗಳನ್ನು ಗುರಿಯಾಗಿರಿಸಿಕೊಂಡು ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಸಿದುಹೋಗಿದೆ. ನಿರುದ್ಯೋಗ ಹೆಚ್ಚುತ್ತಿದೆ. ಸಣ್ಣ ಪುಟ್ಟ ಉದ್ದಿಮೆಗಳು ಬಂದ್ ಆಗುತ್ತಿವೆ. ಸಾಮಾನ್ಯ ಜನರ ಬದುಕು ಬೀದಿಪಾಲಾಗುವ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದ ಬಾಯಿಮುಚ್ಚಿಸಲು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಾದ ಸಿ.ಬಿ.ಐ., ಇ.ಡಿ., ಐ.ಟಿ., ಚುನಾವಣಾ ಆಯೋಗ ಮುಂತಾದ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಸೆದೆ ಬಡಿಯಲು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ADVERTISEMENT

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯಲು ಬಿಜೆಪಿ ನೇರವಾಗಿ ಕಾರಣವಾಗಿದೆ. ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾದವರು ಬಿಜೆಪಿ ಪಕ್ಷದವರೇ ಹೆಚ್ಚಿದ್ದಾರೆ ಎಂದು ದೂರಿದರು.

ಬಿಜೆಪಿ ತನ್ನ ನಡವಳಿಕೆಯನ್ನು ಸರಿಪಡಿಸಿಕೊಳ್ಳದಿದ್ದರೆ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕಿಮ್ಮನೆ ಎಚ್ಚರಿಸಿದರು.

‘ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ಶೇ25 ರಷ್ಟು ಹಣವನ್ನು ತರುವಲ್ಲಿ ಶಾಸಕ ಆರಗ ಜ್ಞಾನೇಂದ್ರ ವಿಫಲರಾಗಿದ್ದಾರೆ. ಆಗುಂಬೆಯಲ್ಲಿ ಆನೆ ಸ್ಥಳಾಂತರಕ್ಕೆ ಸರ್ಕಾರದಿಂದ ಆದೇಶ ಕೊಡಿಸಿದ್ದೆ. ಇದುವರೆಗೂ ಆನೆ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಲು ಶಾಸಕ ಆರಗ ಅವರಿಗೆ ಆಗಿಲ್ಲ ಏಕೆ’ ಎಂದು ಕಿಮ್ಮನೆ ಪ್ರಶ್ನಿಸಿದರು.

ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಬಿಜೆಪಿಗರು ನಡೆಸಿದ್ದ ಸಮಾಜ ಬಾಹಿರ ಕೃತ್ಯಗಳು ಬಯಲಾಗುತ್ತವೆ. ಶಾಲಾ ಬಾಲಕಿ ಸಾವನ್ನು ರಾಜಕೀಯಕ್ಕೆ ಆರಗ ಜ್ಞಾನೇಂದ್ರ ಬಳಸಿಕೊಂಡರೇ ಹೊರತು ಅವರ ಕುಟುಂಬಕ್ಕೆ ನೆರವಾಗಲಿಲ್ಲ ಎಂದು ದೂರಿದರು.

ತೀರ್ಥಹಳ್ಳಿ ಬ್ಲಾಕ್ ಕಾಗ್ರೆಸ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮುಡುಬ ರಾಘವೇಂದ್ರ, ಪ್ರಮುಖರಾದ ಬಂಡಿ ರಾಮಚಂದ್ರ, ಪ್ರಭಾವತಿ ಶಾಮಣ್ಣ, ಹಾರೋಗೊಳಿಗೆ ಪದ್ಮನಾಭ್, ಬಾಳೇಹಳ್ಳಿ ಪ್ರಭಾಕರ್ ಮಾತನಾಡಿದರು.

ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.