ADVERTISEMENT

ಕಲುಷಿತ ಸಮಾಜಕ್ಕೆ ದೈವಶಕ್ತಿಯ ಅನುಗ್ರಹ ಅಗತ್ಯ: ಪೇಜಾವರ ಶ್ರೀ

ಅತಿರುದ್ರ ಮಹಾಯಾಗ

​ಪ್ರಜಾವಾಣಿ ವಾರ್ತೆ
Published 19 ಮೇ 2019, 14:02 IST
Last Updated 19 ಮೇ 2019, 14:02 IST
ಭದ್ರಾವತಿಯಲ್ಲಿ ಭಾನುವಾರ ನಡೆದ ಅತಿರುದ್ರ ಮಹಾಯಾಗದ ಸಮಾರೋಪದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿದರು
ಭದ್ರಾವತಿಯಲ್ಲಿ ಭಾನುವಾರ ನಡೆದ ಅತಿರುದ್ರ ಮಹಾಯಾಗದ ಸಮಾರೋಪದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿದರು   

ಭದ್ರಾವತಿ: ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು, ಭವಿಷ್ಯದ ಬದುಕಿಗೆ ಆತಂಕವನ್ನು ತಂದೊಡ್ಡಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸತ್ಯಸಾಯಿ ಸೇವಾ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ಅತಿರುದ್ರ ಮಹಾಯಾಗದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಪ್ರಕೃತಿಯಲ್ಲಿ ಅಸಹನೀಯ ಪರಿಸ್ಥಿತಿ ಸೃಷ್ಟಿಯಾಗಿ ಎಲ್ಲವೂ ಅವನತಿಯ ಹಾದಿ ಹಿಡಿದಿದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿನ ವರ್ತನೆಗಳು ಸಹ ವ್ಯತಿರಿಕ್ತವಾಗಿವೆ. ಇದು ಸಮಾಜದಲ್ಲಿ ವೈರುಧ್ಯ ಮನಸ್ಸುಗಳು ಹೆಚ್ಚಾಗಲು ಕಾರಣವಾಗಿದೆ ಎಂದರು.

ADVERTISEMENT

ಅನ್ಯಮಾರ್ಗದ ರಾಜಕಾರಣ, ತಂತ್ರಗಳಿಂದ ಜನರ ನಡುವೆ ಬಿರುಕು ಮೂಡುತ್ತಿದೆ. ಯಂತ್ರಗಳು ಹೊರ ಹಾಕುವ ತ್ಯಾಜ್ಯಗಳಿಂದ ಪರಿಸರದ ಮೇಲಿನ ದಬ್ಬಾಳಿಕೆ ಹೆಚ್ಚಿದೆ. ಇದಕ್ಕೆಲ್ಲಾ ಕಾರಣ ಮಾನವನ ದುರಾಸೆ ಕಾರಣ. ಈ ಸಂದರ್ಭದಲ್ಲಿ ನಡೆಯುವ ಇಂತಹ ಯಜ್ಞಯಾಗಾದಿಗಳು ಕಲುಷಿತ ಮನಸ್ಸುಗಳ ಬದಲಾವಣೆಗೆ ನೆರವಾಗಿ ದೈವಿಶಕ್ತಿ ಪ್ರಭಾವವನ್ನು ಸಾಧಿಸುತ್ತದೆ. ಇದು ಸಹಜವಾಗಿ ಹೊಸ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ. ಆಗಾಗ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಹೇಳಿದರು.

ಮಹಾಯಾಗ ನಡೆಸಿಕೊಟ್ಟ ಕೆ.ಎಸ್. ಲಕ್ಷ್ಮೀನಾರಾಯಣ ಸೋಮಯಾಜಿ ಮಾತನಾಡಿದರು. ಪ್ರಭಾಕರ ಬೀರಯ್ಯ, ವೆಂಕಟಗೋಸಾಯಿ, ವಾಸುಕಿ, ಢಾಕಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.