ADVERTISEMENT

ಮುಂದುವರಿದ ಮಳೆ: ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:36 IST
Last Updated 11 ಆಗಸ್ಟ್ 2022, 4:36 IST
ಹೊಸನಗರ ತಾಲ್ಲೂಕು ಹುಳಿಗದ್ದೆ ನೂರ್‌ಜಾನ್ ಅವರ ಮನೆ ಕುಸಿದು ಬಿದ್ದಿದೆ
ಹೊಸನಗರ ತಾಲ್ಲೂಕು ಹುಳಿಗದ್ದೆ ನೂರ್‌ಜಾನ್ ಅವರ ಮನೆ ಕುಸಿದು ಬಿದ್ದಿದೆ   

ಹೊಸನಗರ: ತಾಲ್ಲೂಕಿನಲ್ಲಿ ಮಳೆ ಬುಧವಾರ ಕೂಡ ಮುಂದುವರಿದಿದ್ದು ಭಾರಿ ಪ್ರಮಾಣದಲ್ಲಿ ಅನಾಹುತ ಸೃಷ್ಟಿ ಮಾಡಿದೆ.

ಹಲವೆಡೆ ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ಅಂಚಿನ ಧರೆ ಕುಸಿತ ಕಂಡು ಸಂಚಾರ ದುಸ್ತರವಾಗಿದೆ. ನಾಲ್ಕು ಮನೆಗಳಿಗೆ ಹಾನಿ ಆಗಿದೆ. ಅಲ್ಲದೆ ರೈತರ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ನಾಟಿ ಮಾಡಿದ್ದ ಸಸಿಗಳು ಕೊಚ್ಚಿಕೊಂಡು ಹೋಗಿವೆ. ಸಾರ್ವಜನಿಕ ಆಸ್ತಿ ಪಾಸ್ತಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ಹೊಸನಗರ ಪಟ್ಟಣದಲ್ಲಿ 18.1 ಸೆಂ.ಮೀ ಮಳೆ ಆಗಿದೆ. ಮಾಸ್ತಿಕಟ್ಟೆ 11.1 ಸೆಂ.ಮೀ, ಮಾಣಿ 7.1 ಸೆಂ.ಮೀ, ಯಡೂರು 8.2 ಸೆಂ.ಮೀ ಮಳೆ ಆಗಿದೆ. ಇಲ್ಲಿನ ಜಲಾನಯನ ಪ್ರದೇಶದಲ್ಲಿ ಶೀತಗಾಳಿ ಸಹಿತ ಮಳೆ ಹೆಚ್ಚಾಗಿದ್ದು, ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಘಾಟ್ ಪ್ರದೇಶದಲ್ಲಿ ಮಂಜು ಮುಸುಕಿದೆ. ಸಾವೇಹಕ್ಕಲು ಜಲಾಶಯ ಮತ್ತೊಮ್ಮೆ ತುಂಬಿ ಹರಿಯುವ ಹಂತಕ್ಕೆ ಬಂದಿದೆ. ಚಕ್ರಾ, ಮಾಣಿ, ಪಿಕ್ಅಪ್ ಜಲಾಶಯಗಳು ಭರ್ತಿ ಆಗುವ ಸಂಭವ ಇದೆ.

ADVERTISEMENT

ನಾಲ್ಕು ಮನೆಗೆ ಹಾನಿ: ತಾಲ್ಲೂಕಿನ ಜಯನಗರ ಸಾಲಿಗೇರಿ ಗ್ರಾಮದ ಗೌರಮ್ಮ ಅವರ ಮನೆ ಬಾರಿ ಮಳೆಗೆ ಕುಸಿದು ಬಿದ್ದಿದೆ. ಮಾದಾಪುರ ಗ್ರಾಮದ ಚಂದಳ್ಳಿ ನಿವಾಸಿ ಕಲ್ಲಪ್ಪ ಅವರ ಮನೆ ಕುಸಿದಿದೆ. ರೇಣುಕಪ್ಪ ಅವರ ಮನೆ ಕುಸಿದು ಬಿದ್ದಿದೆ. ಹುಳಿಗದ್ದೆ ಗ್ರಾಮದ ನೂರ್‌ಜಾನ್ ಅವರ ಮನೆ ಭಾಗಶಃ ಕುಸಿದು ಬಿದ್ದಿದೆ.

ಮಳೆಯ ಅಬ್ಬರ: ಗೋಡೆ ಕುಸಿತ

ತೀರ್ಥಹಳ್ಳಿ: ಆಶ್ಲೇಷ ಮಳೆಯ ಅಬ್ಬರಕ್ಕೆ ಪಟ್ಟಣ ಸಮೀಪ ವಿಠಲನಗರದ ಶಾರದಾ ಎಂಬುವವರ ಮನೆಯ ಗೋಡೆ ಮಂಗಳವಾರ ಸಂಜೆ ಕುಸಿದಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.

ಮನೆಯವರೆಲ್ಲರೂ ಹೊರಗಡೆ ಇದ್ದುದರಿಂದ ಅಪಾಯ ತಪ್ಪಿದೆ. ವಿಪರೀತ ಮಳೆಯಿಂದ ಗೋಡೆ ಕುಸಿದಿದ್ದು, ಆಹಾರ ಪದಾರ್ಥಗಳು ನೀರುಪಾಲಾಗಿವೆ. ಪಾತ್ರೆ ಮತ್ತಿತರ ವಸ್ತುಗಳು ನಜ್ಜುಗುಜ್ಜಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.