ADVERTISEMENT

ಶಿವಮೊಗ್ಗ | ಒಂದೇ ದಿನ 22 ಜನರಲ್ಲಿ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 15:42 IST
Last Updated 30 ಜೂನ್ 2020, 15:42 IST
   

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ 22 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಒಟ್ಟು ಸಂಖ್ಯೆ 173ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿ 20ಕ್ಕೂ ಹೆಚ್ಚು ಜನರಿಗೆ ಕೊರೊನಾ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಹೆಚ್ಚಿಸಿದೆ. 22 ಜನರಲ್ಲಿ 13 ಜನರಿಗೆ ಇತರೆರೋಗಿಗಳ ಪ್ರಥಮ ಸಂಪರ್ಕದಿಂದ ವೈರಸ್‌ ಹರಡಿದೆ.

ಪಿ–10827 ರೋಗಿಯಿಂದ ಐವರಿಗೆ, ಪಿ–11197 ರೋಗಿಯಿಂದ ನಾಲ್ವರಿಗೆ, ಪಿ–9546 ರೋಗಿಯಿಂದ ಇಬ್ಬರಿಗೆ ಸೋಂಕು ಹರಡಿದೆ. ಪಿ–10830, ಪಿ–9546 ರೋಗಿಗಳಿಂದ ತಲಾ ಒಬ್ಬರಿಗೆ, ಉಳಿದಂತೆ ತಮಿಳುನಾಡಿನಿಂದ ಬಂದ ಇಬ್ಬರು, ಕತಾರ್‌ನಿಂದ ಒಬ್ಬರು, ಬೆಂಗಳೂರಿನಿಂದ ಬಂದ ಮೂವರಿಗೆ ಸೋಂಕು ತಗುಲಿದೆ. ಮೂವರಿಗೆ ತಗುಲಿದ ಸೋಂಕಿನ ಮೂಲ ಪತ್ತೆಯಾಗಿಲ್ಲ.

ADVERTISEMENT

ಸೋಂಕಿತರಲ್ಲಿ ಶಿಕಾರಿಪುರ ತಾಲ್ಲೂಕು ಖಾವಸಾಪುರದ ವೃದ್ಧೆಯ ಸಂಪರ್ಕದಲ್ಲಿದ್ದ ನಾಲ್ವರಲ್ಲಿ, ಭದ್ರಾವತಿಯ ಸೋಂಕಿತ ಚಾಲಕನ ಸಂಪರ್ಕದಲ್ಲಿದ್ದ ಐವರಲ್ಲೂ ಸೋಂಕು ಕಾಣಿಸಿಕೊಂಡಿದೆ. 2 ವರ್ಷ, 5 ವರ್ಷ ಹಾಗೂ 6 ವರ್ಷದ ಪುಟ್ಟ ಬಾಲಕರು ಹಾಗೂ 3 ವರ್ಷದ ಬಾಲಕಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.

ತಾಲ್ಲೂಕುವಾರು ವಿವರ

ಭದ್ರಾವತಿಯಲ್ಲಿ 7 ಮಂದಿಗೆ, ಶಿಕಾರಿಪುರ ತಾಲ್ಲೂಕು 8, ಹೊಸನಗರ ತಾಲ್ಲೂಕಿನ ರಿಪ್ಪನ್‍ಪೇಟೆ, ಸೊರಬ ಹಾಗೂ ತೀರ್ಥಹಳ್ಳಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಶಿವಮೊಗ್ಗ ನಗರದಲ್ಲಿ ಇಬ್ಬರು ವೈದ್ಯರು ಸೇರಿದಂತೆ ತಾಲ್ಲೂಕಿನಲ್ಲಿ 4 ಮಂದಿಗೆ ಸೋಂಕು ತಗುಲಿದೆ.

ಶಿಕಾರಿಪುರದ ಬಸವಾಪುರದ ವೃದ್ಧೆಯ ಸಾವು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ವೃದ್ಧೆಯ ಸಂಪರ್ಕದಲ್ಲಿದ್ದ ಇನ್ನಷ್ಟು ಜನರಿಗೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶಿವಮೊಗ್ಗದ ಗಾಂಧಿನಗರದ `ಎ' ಬ್ಲಾಕ್‍ನ 5ನೇ ತಿರುವು ಹಾಗೂ 1ನೇ ಅಡ್ಡರಸ್ತೆ ಹಾಗೂ ಭದ್ರಾವತಿಯ ಗಾಂಧಿನಗರ ಸೇರಿದಂತೆ ಹಲವೆಡೆ ಕೊರೋನಾ ಸೋಂಕಿತರು ವಾಸವಿದ್ದ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಒಟ್ಟು 22 ಪ್ರದೇಶಗಳು ಸೀಲ್‌ಡೌನ್‌ ಆಗಿವೆ.

ಶಿವಮೊಗ್ಗ ನಗರ ಪಾಲಿಕೆಗೆ ಸೋಂಕಿತ ವ್ಯಕ್ತಿ ಭೇಟಿ ನೀಡಿದ್ದ ಕಾರಣ ಪಾಲಿಕೆಯ ಹಲವು ವಿಭಾಗಗಳ ಕಚೇರಿ ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಪಾಲಿಕೆಗೆ ಭೇಟಿ ನೀಡುವವರಿಗೆ ಥರ್ಮಲ್‌ ಸ್ಕ್ಯಾನಿಂಗ್ ಕಡ್ಡಾಯ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.