ADVERTISEMENT

ಸಾಗರ: ಲಸಿಕೆ ಸರಬರಾಜು ವಿಳಂಬಕ್ಕೆ ಖಂಡನೆ

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ; ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭಾಗಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 8:17 IST
Last Updated 15 ಜುಲೈ 2021, 8:17 IST
ಸಾಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೋವಿಡ್ ತಡೆ ಲಸಿಕೆ ಸರಬರಾಜಿನಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೋವಿಡ್ ತಡೆ ಲಸಿಕೆ ಸರಬರಾಜಿನಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಸಾಗರ: ಕೋವಿಡ್ ತಡೆ ಲಸಿಕೆ ಸರಬರಾಜಿನಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ‘ಸಕಾಲದಲ್ಲಿ ಲಸಿಕೆ ಪೂರೈಸಲು ಸಾಧ್ಯವಾಗದ ಸರ್ಕಾರವನ್ನು ಅಯೋಗ್ಯ ಸರ್ಕಾರ ಎನ್ನದೇ ವಿಧಿಯಿಲ್ಲ. ಕಷ್ಟದ ಕಾಲದಲ್ಲಿ ಸಮಸ್ಯೆಗೆ ತೀವ್ರವಾಗಿ ಸ್ಪಂದಿಸಬೇಕಾದ ಸರ್ಕಾರ ಲಸಿಕೆ ಕುರಿತು ಬೊಗಳೆ ಬಿಡುವುದರಲ್ಲೇ ನಿರತವಾಗಿದೆ’ ಎಂದು ಟೀಕಿಸಿದರು.

‘ನಾವು ವಿರೋಧಕ್ಕಾಗಿ ವಿರೋಧ ಮಾಡುತ್ತಿಲ್ಲ. ಜನರ ಹಿತ ಕಾಯಲು ಸರ್ಕಾರದ ಕಿವಿ ಹಿಂಡುವುದು ಅನಿವಾರ್ಯವಾಗಿದೆ. ಸಕಾಲದಲ್ಲಿ ಲಸಿಕೆ ಸರಬರಾಜು ಮಾಡಲಾಗದ ಜನಪ್ರತಿನಿಧಿಗಳನ್ನು ನೀವು ಆಡಳಿತ ನಡೆಸಲು ಬಂದಿರುವಿರೋ ಅಥವಾ ಕೇವಲ ಖುರ್ಚಿಗೆ ಅಂಟಿಕೊಳ್ಳಲು ಇದ್ದೀರೋ ಎಂದು ಪ್ರಶ್ನಿಸಲೇಬೇಕಾಗಿದೆ’ ಎಂದರು.

ADVERTISEMENT

ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ‘ಹಿರಿಯರಾದ ಕಾಗೋಡು ತಿಮ್ಮಪ್ಪ ಅವರಿಗೆ ಇಲ್ಲಿನ ಲಸಿಕಾ ಕೇಂದ್ರದಲ್ಲಿ ಸಕಾಲದಲ್ಲಿ ಲಸಿಕೆ ದೊರಕಿಲ್ಲ. ಹಾಗಾದರೆ ಜನಸಾಮಾನ್ಯರ ಪಾಡೇನು’ ಎಂದು ಪ್ರಶ್ನಿಸಿ, ‘ಭಾರತದಂತಹ ಜನಸಂಖ್ಯೆ ಹೆಚ್ಚಿರುವ ದೇಶದಲ್ಲಿ ದೀರ್ಘಕಾಲ ಅಂತರ ಕಾಪಾಡಿಕೊಂಡು ಬದುಕುವುದು ಕಷ್ಟಸಾಧ್ಯ. ಕೋವಿಡ್ ತಡೆಯಲು ಲಸಿಕೆ ಹಾಕಿಸಿಕೊಳ್ಳುವುದೇ ಪರಿಣಾಮಕಾರಿ ಮಾರ್ಗವಾಗಿದೆ. ಆದರೆ, ಸರ್ಕಾರ ಲಸಿಕೆ ಸರಬರಾಜಿನಲ್ಲಿ ಎಡವುತ್ತಿದೆ’ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ‘ಲಸಿಕಾ ಕೇಂದ್ರಕ್ಕೆ ಬನ್ನಿ ಎಂದು ಮೊಬೈಲ್‌ಗೆ ಸಂದೇಶ ಪಡೆದವರು ಅಲ್ಲಿಗೆ ಹೋದರೆ ಲಸಿಕೆ ದಾಸ್ತಾನು ಇಲ್ಲ ಎಂಬ ಫಲಕ ನೋಡಿ ವಾಪಸ್ ಬರುವಂತಾಗಿದೆ. ಇದೊಂದು ಹೊಣೆಗಾರಿಕೆ ಇಲ್ಲದ ಬೇಜವಾಬ್ದಾರಿ ಸರ್ಕಾರವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ‘ಇಲ್ಲಿನ ದೇವರಾಜ ಅರಸು ಸಭಾಭವನದಲ್ಲಿನ ಲಸಿಕಾ ಕೇಂದ್ರದ ನಿರ್ವಹಣೆಯಲ್ಲಿ ಅವ್ಯವಸ್ಥೆ ತಲೆದೋರಿದೆ. ಅಲ್ಲಿನ ಸೂಕ್ತ ನಿರ್ವಹಣೆಗೆ ನಿವೃತ್ತ ವೈದ್ಯರು ಹಾಗೂ ತಾಂತ್ರಿಕವಾಗಿ ಪರಿಣತಿ ಹೊಂದಿದ ತಜ್ಞರನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ‘ಇಲ್ಲಿನ ಲಸಿಕಾ ಕೇಂದ್ರದಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಸಾರಾಸಗಟಾಗಿ ಉಲ್ಲಂಘಿಸಲಾಗುತ್ತಿದೆ. ಆದಾಗ್ಯೂ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನವಹಿಸಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್‌ನ ಪ್ರಮುಖರಾದ ಮಧು ಮಾಲತಿ, ಜ್ಯೋತಿ ಕೋವಿ, ಎಲ್.ಟಿ.ತಿಮ್ಮಪ್ಪ, ಕೆ.ಹೊಳಿಯಪ್ಪ, ರತ್ನಾಕರ ಹೊನಗೋಡು, ಕೆ.ಎಸ್.ಪ್ರಶಾಂತ್, ತಶ್ರೀಫ್ ಇಬ್ರಾಹಿಂ, ತುಕಾರಾಂ ಶಿರವಾಳ, ಗಣಪತಿ ಮಂಡಗಳಲೆ, ಕೆ.ಎಚ್.ರಮೇಶ್, ಪ್ರೇಮ್ ಸಿಂಗ್, ತಾರಾಮೂರ್ತಿ, ಸಂತೋಷ್ ಸದ್ಗುರು, ಮಹ್ಮದ್ ಜಿಕ್ರಿಯಾ, ಕೆ.ಎಲ್.ಬೋಜರಾಜ್, ಮಹಾಬಲ ಕೌತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.