ADVERTISEMENT

ನನ್ನ ವಿರುದ್ಧದ ಟೀಕೆ, ನಿಂದನೆ ಅಸಹಿಷ್ಣುತೆಯ ದ್ಯೋತಕ: ಆಯನೂರು

ಶಿವಮೊಗ್ಗದಿಂದ ಸ್ಪರ್ಧಿಸಿಯೇ ಸಿದ್ಧ; ಪಕ್ಷ ಟಿಕೆಟ್ ಕೊಡಲಿದೆ: ಆಯನೂರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 5:24 IST
Last Updated 24 ಮಾರ್ಚ್ 2023, 5:24 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ: ‘ನಾನು ನನ್ನ ಸಂತತಿ ಎಂಬುದು ಪಕ್ಷದ ನೀತಿಯಲ್ಲ. ಅದಕ್ಕಾಗಿಯೇ ರಂಗ ಪ್ರವೇಶ ಮಾಡಿದ್ದೇನೆ. ಮುಸ್ಲಿಮರೊಂದಿಗೆ ಬಾಂಧವ್ಯ ಬೆಸೆಯುವುದು ಪಕ್ಷ ದ್ರೋಹ ಕೆಲಸವಾ‘ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನಿಸಿದರು.

‘ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನನಗೆ ಪಕ್ಷ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಕೊಟ್ಟೇ ಕೊಡುತ್ತದೆ. ಆ ಅರ್ಹತೆಯೂ ನನಗೆ ಇದೆ. ನನಗೆ ಟಿಕೆಟ್ ಬೇಕು ಎಂದು ಕೇಳಿದ್ದಕ್ಕೆ, ಅಭಿಮಾನಿಗಳು ಫ್ಲೆಕ್ಸ್ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅಶ್ಲೀಲ ಟೀಕೆ, ವೈಯಕ್ತಿಕ ನಿಂದನೆಗಳು ಆರಂಭವಾಗಿವೆ. ಅದೆಲ್ಲಾ ಅಸಹಿಷ್ಣುತೆಯ ದ್ಯೋತಕ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ‘ನಿತ್ಯ ಸುಮಂಗಲಿ’ ಪದ ಬಳಸಲಾಗಿದೆ. ಇದು ಯಾರು ಮಾಡಿದ್ದಾರೆ. ಏಕೆ ಮಾಡಿದ್ದಾರೆ ಎಂದು ಗೊತ್ತು. ಟೀಕಾಕಾರರಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ. ಹಾಗೆ ಅವಹೇಳನಕಾರಿಯಾಗಿ ಟೀಕೆ ಮಾಡಿರುವವರು ನೈಜ ಬಿಜೆಪಿ ಕಾರ್ಯಕರ್ತರಲ್ಲ. ಬದಲಿಗೆ ಯಾರೋ ಹಾಕುವ ಬಿಸ್ಕತ್‌ ತಿನ್ನುವವರು’ ಎಂದು ತಿರುಗೇಟು ನೀಡಿದರು.

ADVERTISEMENT

‘ಫ್ಲೆಕ್ಸ್ ವಿಚಾರ ನಿರೀಕ್ಷೆಗೂ ಮೀರಿ ಜನರ ಗಮನಸೆಳೆದಿದೆ. ಅದರಲ್ಲಿ ಬಳಸಿರುವ ಶಾಂತಿ ಸೌಹಾರ್ದತೆ ಬೇಕು ಎಂಬ ಪದವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಕೆಲವರು ಟೀಕೆ ಕೂಡ ಮಾಡಿದ್ದಾರೆ. ಅಂತಹವರಿಗೆ ಶಿವಮೊಗ್ಗದಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ. ಪಕ್ಷ ನನಗೆ ವಿವಿಧ ಹುದ್ದೆಗಳ ಕೊಟ್ಟಿದೆ. ಅಧಿಕಾರದ ಅವಧಿಯಲ್ಲಿ ಸಾಕಷ್ಟು ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.

‘ಕೆ.ಎಸ್.ಈಶ್ವರಪ್ಪ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳಲಿ. ನನ್ನ ಹಾಗೆಯೇ ಅವರಿಗೂ 32 ವರ್ಷಗಳಿಂದ ಬಿಜೆಪಿ ದೊಡ್ಡ ಹುದ್ದೆಗಳನ್ನು ನೀಡಿದೆ. ಸೋತಾಗ ನಿಗಮ ಮಂಡಳಿ, ವಿಧಾನಪರಿಷತ್‌ಗೆ ನೇಮಿಸಿದೆ. ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ’ ಎಂದರು.

‘ಬಿಜೆಪಿ ಟಿಕೆಟ್ ನೀಡದಿದ್ದರೆ ನಿಮ್ಮ ಮುಂದಿನ ನಡೆ ಏನು’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಪಕ್ಷ ಟಿಕೆಟ್ ಕೊಟ್ಟೇ ಕೊಡುತ್ತದೆ. ಅಷ್ಟಕ್ಕೂ ಕೊಡದಿದ್ದರೆ ಮಾಧ್ಯಮದವರ ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳುವೆ’ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯ ಪ್ರಜಾ‍ಪ್ರಭುತ್ವದ ಪ್ರತೀಕ

‘ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಫ್ಲೆಕ್ಸ್‌ ಹಾಕಿರುವುದು. ಸೊರಬದಲ್ಲಿ ನಮೋ ವೇದಿಕೆಯ ಚಟುವಟಿಕೆ, ಸಾಗರದಲ್ಲಿ ಶಾಸಕರ ವಿರುದ್ಧದ ಭಿನ್ನ ಧ್ವನಿಯ ವಿಚಾರಗಳು ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿರುವುದರ ದ್ಯೋತಕ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

’20 ಕೋಟಿ ಜನರು ಇರುವ ಬೃಹತ್ ಪಕ್ಷ ನಮ್ಮದು. ಎಲ್ಲರಿಗೂ ಸ್ಪರ್ಧಿಸುವ ಅಪೇಕ್ಷೆಗಳು ಇರುತ್ತವೆ. ನನಗೂ ಸ್ಪರ್ಧೆ ಮಾಡಲು ಅವಕಾಶ ಸಿಕ್ಕರೆ ಎಂಬ ಭಾವನೆ ಇರುತ್ತದೆ. ಹೀಗಾಗಿ ಇಂತಹ ಸಂಗತಿಗಳು ಅತ್ಯಂತ ಸಾಮಾನ್ಯ. ಬೇರೆ ಪಕ್ಷಗಳಿಗೆ ಹೋಲಿಸಿದರೆ ಅತಿ ಕಡಿಮೆ ವಿಚಾರಗಳು ಇವು’ ಎಂದರು.

‘ಜಿಲ್ಲೆಯ ಸಂಘಟನೆಯ ವಿಚಾರದಲ್ಲಿ ಇಲ್ಲಿ ಏನು ನಡೆಯುತ್ತಿದೆಯೋ ಅದನ್ನೆಲ್ಲ ರಾಜ್ಯ ಘಟಕದ ಅಧ್ಯಕ್ಷರಿಗೆ ಅಧಿಕೃತವಾಗಿ ವರದಿ ನೀಡಿದ್ದೇವೆ. ಅಭ್ಯರ್ಥಿ ಆಯ್ಕೆ ವೇಳೆ ಪಕ್ಷಕ್ಕೆ ಮಾಡಿದ ಕೆಲಸದ ಆಧಾರದ ಮೇಲೆ ಪಡೆದ ಪೂರಕ ಅಂಕಗಳನ್ನು ಕೊಡಲಾಗುತ್ತದೆ. ಪಕ್ಷದ ಘನತೆ–ಗೌರವಕ್ಕೆ ಚ್ಯುತಿ ಬರುವಂತಹ ಕೆಲಸಗಳನ್ನು ಗಮನಿಸಲಾಗುತ್ತಿದೆ. ಅದೆಲ್ಲವನ್ನೂ ಸರಿಪಡಿಸುವ ಕೆಲಸ ಸೂಕ್ತ ಸಂದರ್ಭದಲ್ಲಿ ನಡೆಯಲಿದೆ’ ಎಂದರು.

ಪಕ್ಷದ ತೀರ್ಮಾನಕ್ಕೆ ಬದ್ಧ: ಈಶ್ವರಪ್ಪ

‘ರಾಜಕೀಯಕ್ಕೆ ಇಳಿದ ನಂತರ ಮನಸ್ಸು ತೃಪ್ತಿಯಾಗಿ, ಜನರ ಮನಸ್ಸು ಮೆಚ್ಚುವಂತೆ ನಾನು ಕೆಲಸ ಮಾಡಿದ್ದೇನೆ. ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದಿಂದ ಸಮೀಕ್ಷೆ ನಡೆಯುತ್ತಿದೆ. ಕೇಂದ್ರದ, ರಾಜ್ಯದ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೊ ಅದಕ್ಕೆ ನಾನು ಬದ್ಧನಾಗಿರುತ್ತೇನೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

‘ಕೆಲಸ ಮಾಡುವಾಗ ನೂರಾರು ಟೀಕೆಗಳು ಬರುತ್ತವೆ. ಅವನ್ನೆಲ್ಲ ಲೆಕ್ಕದಲ್ಲೇ ಇಟ್ಟುಕೊಂಡಿಲ್ಲ. ಜನರ ಮಧ್ಯೆ ಇದ್ದು ಜನರ ಕೆಲಸ ಮಾಡುವ ವ್ಯಕ್ತಿ ನಾನು. ಚುನಾಯಿತ ಪ್ರತಿನಿಧಿ ಆಗಿ ಜನರ ಕೆಲಸ ಏನು ಮಾಡಬೇಕು ಎಂಬುದರ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆ. ಗೆಲುವು–ಸೋಲು ಜನರು ಮುಂದೆ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾನು ಬದ್ಧ’ ಎಂದರು.

‘ಆಯನೂರು ಹೇಳಿಕೆ ನಿಮಗೇನೂ ಲೆಕ್ಕಕ್ಕೆ ಇಲ್ಲವೇ ಎಂಬ ಪ್ರಶ್ನೆಗೆ ನಿಮ್ಮದೇ (ಮಾಧ್ಯಮ) ಲೆಕ್ಕಕ್ಕಿಟ್ಟುಕೊಂಡಿಲ್ಲ. ಇನ್ನು ಅವರದ್ದೇನು ಇಟ್ಟುಕೊಳ್ಳಲಿ’ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.