ADVERTISEMENT

ಎಂ.ಆರ್ ಲಸಿಕಾಕರಣ, ಶೇ 100 ರಷ್ಟು ಗುರಿ ಸಾಧಿಸಿ; ಡಿ.ಸಿ

-

​ಪ್ರಜಾವಾಣಿ ವಾರ್ತೆ
Published 30 ಮೇ 2023, 15:49 IST
Last Updated 30 ಮೇ 2023, 15:49 IST

ಶಿವಮೊಗ್ಗ: ದಡಾರ ರುಬೆಲ್ಲಾ ರೋಗದಿಂದ ರಕ್ಷಿಸಲು ಎಲ್ಲ ಅರ್ಹ ಮಕ್ಕಳಿಗೆ ಎಂ.ಆರ್ ಲಸಿಕೀಕರಣ ಆಗಬೇಕು. ಈ ನಿಟ್ಟಿನಲ್ಲಿ ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ಶೇ 100ರಷ್ಟು ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ, ದಡಾರ ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮ ಹಾಗೂ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕುರಿತು ಚಾಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ವರ್ಷದ ಅಂತ್ಯದೊಳಗೆ ದಡಾರ– ರುಬೆಲ್ಲಾ ನಿರ್ಮೂಲನೆ ಗುರಿ ಸರ್ಕಾರ ಹೊಂದಿದೆ. ಮಕ್ಕಳನ್ನು ಎಂ.ಆರ್.ವೈರಸ್ ಸೋಂಕಿನಿಂದ ಮುಕ್ತಗೊಳಿಸಿ ಅದರಿಂದ ಉಂಟಾಗುವ ಸಾವುಗಳ ತಡೆಗಟ್ಟುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಬ್ಲಾಕ್‍ವಾರು ಕಡಿಮೆ ಲಸಿಕಾಕರಣ ಆಗಿರುವ ಕಡೆ ಕೇಂದ್ರೀಕರಿಸಿ ತಾಲ್ಲೂಕು ವೈದ್ಯಾಧಿಕಾರಿಗಳು, ಸಿಡಿಪಿಒ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆ ನಡೆಸಿ, ಮನೆ ಮನೆ ಅಭಿಯಾನ ಕೈಗೊಂಡು ಶೇ 100 ಲಸಿಕಾಕರಣ ಆಗಬೇಕು ಎಂದು ಸೂಚಿಸಿದರು.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 40 ಕುಷ್ಠರೋಗ ಪ್ರಕರಣ ಪತ್ತೆಯಾಗಿದ್ದು, ಪ್ರಸಕ್ತ ಸಾಲಿನ ಇಲ್ಲಿಯವರೆಗೆ 12 ಪ್ರಕರಣ ಪತ್ತೆಯಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ ಅರಿವು ಕಾರ್ಯಕ್ರಮ, ಆರಂಭಿಕ ಪತ್ತೆ ಅಭಿಯಾನ, ರಾಷ್ಟ್ರೀಯ ಕುಷ್ಟರೋಗ ನಿವಾರಣಾ ಕಾರ್ಯಕ್ರಮ, ಐಇಸಿ ಮೂಲಕ  ರೋಗ ನಿರ್ಮೂನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ಶಮಾ ಮಾಹಿತಿ ನೀಡಿದರು.

ಸಭೆಯಲ್ಲಿ ಆರ್‌ಸಿಎಚ್‍ ಅಧಿಕಾರಿ ಡಾ.ನಾಗರಾಜನಾಯ್ಕ್, ಡಿಎಚ್‍ಒ ಡಾ.ರಾಜೇಶ್ ಸುರಗಿಹಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.