ADVERTISEMENT

ಡಿಸಿಸಿ ಬ್ಯಾಂಕ್ ಹಗರಣ: ಮಂಜುನಾಥ ಗೌಡ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 4:02 IST
Last Updated 26 ಸೆಪ್ಟೆಂಬರ್ 2021, 4:02 IST
ಆರ್.ಎಂ. ಮಂಜುನಾಥಗೌಡ
ಆರ್.ಎಂ. ಮಂಜುನಾಥಗೌಡ   

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಗಾಂಧಿ ಬಜಾರ್ ಶಾಖೆಯಲ್ಲಿ2014ರಲ್ಲಿ ನಡೆದ ಚಿನ್ನ ಅಡಮಾನ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ಆರ್‌.ಎಂ. ಮಂಜುನಾಥಗೌಡ ವಿರುದ್ಧ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಡಿಸಿಸಿ ಬ್ಯಾಂಕ್‌ ಹಗರಣವನ್ನು ಮರು ತನಿಖೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಗಾಂಧಿ ಬಜಾರ್‌ ಶಾಖೆಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿ ನಕಲಿ ಬಂಗಾರ ಅಡವಿಟ್ಟು ₹ 62.77 ಕೋಟಿ ವಂಚಿಸಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಸೇರಿ 18 ಜನರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಸಿಐಡಿಗೆ ತನಿಖೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ ಸಿಐಡಿ, ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡರಿಗೆ ಕ್ಲೀನ್‌ಚಿಟ್ ನೀಡಿತ್ತು.

ಈ ಮಧ್ಯೆ ಸಹಕಾರ ಇಲಾಖೆ ಮಂಜುನಾಥಗೌಡರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿತ್ತು. ಎಂ.ಬಿ. ಚನ್ನವೀರಪ್ಪ ಬ್ಯಾಂಕ್‌ ಅಧ್ಯಕ್ಷರಾದ ನಂತರ ಬಂಗಾರ ಅಡಮಾನ ಸಾಲ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಬ್ಯಾಂಕ್‌ನ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಸರ್ಕಾರದ ಆದೇಶದಂತೆ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿ ದಾಖಲಾತಿ, ಸಾಕ್ಷಿಗಳ ಹೇಳಿಕೆಗಳ ಆಧಾರ ಮೇಲೆ ಆರೋಪಿಗಳಾದ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗಭೂಷಣ್ ವಿರುದ್ಧ ಆರೋಪಗಳು ಸಾಬೀತಾದ ಕಾರಣ ಇವರ ವಿರುದ್ಧ ದೋಪಲೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.