ADVERTISEMENT

ಡಿಸಿಸಿ ಬ್ಯಾಂಕ್ ಸ್ಥಿರ ಠೇವಣಿ ₹1 ಸಾವಿರ ಕೋಟಿ

ಮಾರ್ಚ್ ಒಳಗೆ ಸಾಧನೆಯ ಶ್ರೇಯ: ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಮಾಹಿತಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 15:30 IST
Last Updated 28 ಡಿಸೆಂಬರ್ 2019, 15:30 IST
ಆರ್.ಎಂ.ಮಂಜುನಾಥ ಗೌಡ
ಆರ್.ಎಂ.ಮಂಜುನಾಥ ಗೌಡ   

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸ್ಥಿರ ಠೇವಣಿ ಮೊತ್ತ ಮಾರ್ಚ್‌ ವೇಳೆಗೆ ₹ 1 ಸಾವಿರ ಕೋಟಿ ತಲುಪಲಿದೆ. ಆ ಮೂಲಕ ಷಡ್ಯೂಲ್ ಬ್ಯಾಂಕ್ ಶ್ರೇಯಕ್ಕೆ ಪಾತ್ರವಾಗಲಿದೆ.

ಪ್ರಸ್ತುತ ಬ್ಯಾಂಕ್‌ ಠೇವಣಿ ₹ 850 ಕೋಟಿ ಇದೆ. ₹1,200 ಕೋಟಿ ವಹಿವಾಟು ನಡೆದಿದೆ. ಠೇವಣಿ ಒಂದು ಸಾವಿರ ಕೋಟಿ ದಾಟಿದರೆ ಬ್ಯಾಂಕ್ ಮತ್ತೊಂದು ಹೆಜ್ಜೆ ಇಟ್ಟಂತೆ ಆಗುತ್ತದೆ. ಗೃಹ ನಿರ್ಮಾಣ ಸಾಲ ಸೇರಿಂದತೆ ಕೃಷಿಯೇತರ ಸಾಲಗಳ ಸಂಖ್ಯೆ ಹೆಚ್ಚಿಸಲು, ನಬಾರ್ಡ್ ಮೇಲಿನ ಅವಲಂಬನೆ ಕಡಿಮೆ ಮಾಡಲು, ಸ್ವಾಯತ್ತತೆಯತ್ತ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಲ್ಲ ಸಂಘಗಳಿಗೂ ಒಂದೇ ಸಾಫ್ಟ್‌ವೇರ್:

ADVERTISEMENT

ಜಿಲ್ಲೆಯಲ್ಲಿ 168 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಎಲ್ಲ ಸಂಘಗಳೂ ಗಣಕೀಕೃತಗೊಳ್ಳಬೇಕು. ಏಕರೀತಿಯ ಸಾಫ್ಟ್‌ವೇರ್ ಅಳವಡಿಸಿಕೊಳ್ಳಬೇಕು. ಡಿಸಿಸಿ ಬ್ಯಾಂಕ್‌ನಲ್ಲಿ ದತ್ತಾಂಶ ನಿರ್ವಹಣಾ ಕೇಂದ್ರವಿರುತ್ತದೆ. ಕೆಳ ಹಂತದಿಂದ ನಬಾರ್ಡ್‌ವರೆಗೂ ಒಂದೇ ತಂತ್ರಾಂಶ ಅಳವಡಿಸಿಕೊಳ್ಳಬೇಕಿದೆ. ಹಾಗಾಗಿ, ಏಕರೀತಿಯ ಸಾಫ್ಟ್‌ವೇರ್ ಅಳವಡಿಸಲಾಗುತ್ತಿದೆ. ಸುಗಮ ಅನುಷ್ಠಾನಕ್ಕಾಗಿ ಕಾರ್ಯದರ್ಶಿಗಳು, ಲೆಕ್ಕಪರಿಶೋಧಕರು, ಸಹಾಯಕ ನಿರ್ದೇಶಕರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತಿದೆ. ಶೀಘ್ರ ಟೆಂಡರ್ ಕರೆಯಲಾಗುವುದು. ಮಾರ್ಚ್ 31ರ ಒಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ವಿವರ ನೀಡಿದರು.

1.40 ಲಕ್ಷ ಎಟಿಎಂ ವಿತರಣೆ:

2.40 ಲಕ್ಷ ಗ್ರಾಹಕರು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಿದ್ದಾರೆ. ಅವರಲ್ಲಿ 1.40 ಲಕ್ಷ ಗ್ರಾಹಕರಿಗೆ ಎಟಿಎಂ ಕಾರ್ಡ್ ವಿತರಿಸಲಾಗಿದೆ. ಉಳಿದವರಿಗೆ ಶೀಘ್ರ ನೀಡಲಾಗುವುದು. 12 ಸಾವಿರ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. 3,600 ಗುಂಪುಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ. ಉದ್ಯೋಗ ಘಟಕಗಳ ಸ್ಥಾಪನೆಗೆ ಒಂದು ಗುಂಪಿಗೆ ₨ 10 ಲಕ್ಷದವರೆಗೂ ನೆರವು ನೀಡಲಾಗುತ್ತಿದೆ.ವಾಣಿಜ್ಯಉತ್ಪನ್ನಗಳ ಸಂಗ್ರಹ, ಕುರಿ ಸಾಕಾಣಿಕೆ, ಫಾರ್ಂ ಹೌಸ್, ಕೋಳಿ ಸಾಕಾಣಿಕೆ ಮತ್ತಿತರ ಉದ್ದೇಶಕ್ಕೆ ನೆರವು ನೀಡಲಾಗುತ್ತಿದೆ. ರೈತರಿಗೆ ವಾಹನ ಖರೀದಿಸಲು ಶೇ 9.50 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಇ–ಆಟೊರಿಕ್ಷಾ ಖರೀದಿಗೂ ಸಾಲ ಸೌಲಭ್ಯವಿದೆ ಎಂದರು.

ಒಂದು ಲಕ್ಷ ದಾಟಲಿರುವ ರೈತರು:

ಬ್ಯಾಂಕ್ ಈಗಾಗಲೇ 98,665 ರೈತರಿಗೆ ಬೆಳೆ ಸಾಲ ನೀಡಿದೆ. ಈ ಸಂಖ್ಯೆ ₨ 1 ಲಕ್ಷ ದಾಟಲಿದೆ. ಜಿಲ್ಲೆಯಲ್ಲಿ 28 ಶಾಖೆಗಳಿಂದ ಇಂತಹ ಸಾಧನೆ ಮಾಡಲಾಗಿದೆ. ಇತರೆ ಎಲ್ಲ ಬ್ಯಾಂಕ್‌ಗಳು ಸೇರಿ ಜಿಲ್ಲೆಯಲ್ಲಿ 282 ಶಾಖೆ ಹೊಂದಿವೆ. ಅವುಗಳ ಒಟ್ಟು ಸಾಧನೆ ಡಿಸಿಸಿ ಬ್ಯಾಂಕ್‌ಗೆ ಸಮವಾಗಿಲ್ಲ. ರಾಜ್ಯದಲ್ಲೇ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಬ್ಯಾಂಕ್ ಹೊರತಂದ ಜಿಲ್ಲೆಯ ಪ್ರವಾಸಿ, ಐತಿಹಾಸಿಕ ತಾಣಗಳ ಮಾಹಿತಿ ಒಳಗೊಂಡ 2020ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ನಿರ್ದೇಶಕರಾದ ಎಸ್.ಪಿ.ದಿನೇಶ್, ಎಚ್‌.ಎಲ್.ಷಡಾಕ್ಷರಿ, ಸುಧೀರ್, ಯೋಗೀಶ್, ಅಗಡಿ ಅಶೋಕ್, ಚನ್ನವೀರಪ್ಪ, ದುಗ್ಗಪ್ಪ ಬೌಡ, ಪರಮೇಶ್, ಭೂಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.