ಹೊಳೆಹೊನ್ನೂರು: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬಡ ಹಾಗೂ ಕೂಲಿ ಕಾರ್ಮಿಕರಿಗೆ 100 ದಿನ ಉದ್ಯೋಗ ನೀಡುವಂತೆ ಆಗ್ರಹಿಸಿ ಬುಧವಾರ ಸಮೀಪದ ಅರಬಿಳಚಿ ಗ್ರಾಮ ಪಂಚಾಯಿತಿ ವಿರುದ್ಧ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
‘ಗ್ರಾಮೀಣ ಪ್ರದೇಶ ಅಭಿವೃದ್ಧಿಯಾದರೇ ದೇಶದ ಅಭಿವೃದ್ಧಿ ಸಾಧ್ಯ. ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಡ ಹಾಗೂ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಜೀವನ ನಡೆಸುವುದು ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ವರ್ಷಕ್ಕೆ 100 ದಿನಗಳ ಕಾಲ ನೀಡುವ ಉದ್ಯೋಗವನ್ನು ಮೊಟಕುಗೊಳಿಸಿ ಗಾಯದ ಮೇಲೆ ಬರೆ ಹಾಕಿದಂತಾಗಿದೆ’ ಎಂದು ದೂರಿದರು.
‘ಅರಬಿಳಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 30– 40 ವರ್ಷಗಳಿಂದ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಒಂದು ನಿವೇಶನ ಸಹ ನೀಡಿಲ್ಲ. ಈ ಬಗ್ಗೆ ತಕ್ಷಣ ಗಮನ ಹರಿಸಬೇಕು. ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ಕಾನೂನು ಪ್ರಕಾರ ನಡೆಸದೆ ಸರ್ಕಾರದ ಸೌಲಭ್ಯಗಳು ವಸತಿ ಯೋಜನೆ, ಸಾಲ ಸೌಲಭ್ಯ, ಇನ್ನಿತರ ಯಾವುದೇ ಯೋಜನೆಗಳನ್ನು ಗ್ರಾಮದ ಜನರಿಗೆ ಹಾಗೃತಿ ಮೂಡಿಸದೆ ಕೆಲವೇ ಜನರು ಸೌಲಭ್ಯಗಳನ್ನು ಪಡೆಯುತ್ತಿದ್ದು, ನಿಜವಾದ ಬಡವರಿಗೆ ಕಾನೂನಿನ ಅರಿವಿಲ್ಲದೆ, ಜಾಗೃತಿ ಮೂಡಿಸದೆ ಗ್ರಾಮ ಪಂಚಾಯಿತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ– ಸ್ವತ್ತು, ಖಾತೆ, ಪೌತಿ ಖಾತೆ, ಪಿಂಚಣಿ ಸೌಲಭ್ಯಗಳ ಬಗ್ಗೆ, ಸರ್ಕಾರದ ಅನೇಕ ಸೌಲಭ್ಯಗಳ ಬಗ್ಗೆ ಯಾವುದೇ ಗ್ರಾಮಸಭೆಯಲ್ಲಿ ಸಾರ್ವಜನಿಕರಿಗೆ ತಿಳಿಯಪಡಿಸದೇ ಏಕಾಏಕಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸದೆ ಇದ್ದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.
ನಂತರ ಭದ್ರಾವತಿ ಇಒ ಗಂಗಣ್ಣ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಚಂದ್ರಪ್ಪ, ವೀರೇಶ್, ಮಂಜಮ್ಮ, ಲತಾ, ಪ್ರೇಮಾ, ಕರಿಯಮ್ಮ, ಆಶಾ, ಗೌರಮ್ಮ ಜಯ, ಗಂಗಾಧರ, ನಾಗರಾಜ್, ರೂಪಾ, ಗೀತಾ, ಯಶೋಧಮ್ಮ ಸೇರಿ ಇನ್ನಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.