ಕೆಎಸ್ಆರ್‌ಟಿಸಿ ಬಸ್
(ಪ್ರಾತಿನಿಧಿಕ ಚಿತ್ರ)
ಸಾಗರ: ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ನೂತನ ಸೇತುವೆ ಜುಲೈ 14 ರಂದು ಲೋಕಾರ್ಪಣೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗದಿಂದ ಸಿಗಂದೂರು ಮಾರ್ಗವಾಗಿ ಕೋಗಾರ್‌ಗೆ ಸರ್ಕಾರಿ ಬಸ್ ಸಂಚಾರ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶಿವಮೊಗ್ಗದಿಂದ ಆನಂದಪುರಂ, ಅಡೂರು, ಹೆಬೈಲು, ಹೆಗ್ಗೋಡು, ನಂದಿಗೋಡು, ಗೆಣಸಿನಕುಣಿ, ಹುಲಿದೇವರಬನ, ಹೊಳೆಬಾಗಿಲು, ಸಿಗಂದೂರು ಮಾರ್ಗವಾಗಿ ಕೋಗಾರ್‌ಗೆ ಬಸ್ ಸಂಚಾರ ಆರಂಭಿಸಿದರೆ ಈ ಭಾಗದ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ, ಕೆಎಸ್ಆರ್‌ಟಿಸಿ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
ಈ ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾದರೆ ಇರುವಕ್ಕಿಯ ಕೃಷಿ ವಿಶ್ವವಿದ್ಯಾಲಯ, ಯಾತ್ರಾ ಕ್ಷೇತ್ರವಾಗಿರುವ ಸಿಗಂದೂರು, ಕೋಗಾರ್ ಸಮೀಪದ ಭೀಮೇಶ್ವರ ಕ್ಷೇತ್ರಕ್ಕೂ ಭೇಟಿ ನೀಡಲು ಜನರಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.