ADVERTISEMENT

ಹಕ್ಕುಗಳ ರಕ್ಷಣೆಯಿಂದ ಪ್ರಜಾಪ್ರಭುತ್ವ ಭದ್ರ

ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 5:21 IST
Last Updated 12 ಡಿಸೆಂಬರ್ 2020, 5:21 IST
ಭದ್ರಾವತಿ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಜರುಗಿದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮಕ್ಕೆ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಚಾಲನೆ ನೀಡಿದರು
ಭದ್ರಾವತಿ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಜರುಗಿದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮಕ್ಕೆ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಚಾಲನೆ ನೀಡಿದರು   

ಭದ್ರಾವತಿ: ‘ಜನರಿಗೆ ಸಿಕ್ಕಿರುವ ಹಕ್ಕುಗಳನ್ನು ರಕ್ಷಿಸುವ ಮೂಲಕ ಅವನ್ನು ಸಮರ್ಪಕವಾಗಿ ಪಡೆಯುವ ಕೆಲಸ ನಡೆದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಿರುತ್ತದೆ’ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಹೇಳಿದರು.

ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವೀಯ ಸಮಾಜ ನಿರ್ಮಾಣದಲ್ಲಿ ಮಾನವ ಹಕ್ಕುಗಳ ಪಾತ್ರ ಹಿರಿದು. ಕಾಯ್ದೆ, ಕಾನೂನು ಇದ್ದರೂ ಅದನ್ನು ಯಶಸ್ವಿಯಾಗಿ ಜಾರಿ ಮಾಡುವ ಮನಸ್ಸು ನಮ್ಮನ್ನಾಳುವ ಜನರಿಗೆ ಇರಬೇಕು. ಅದಕ್ಕೆ ತಕ್ಕಂತೆ ಅಧಿಕಾರಶಾಹಿ ಆಡಳಿತವರ್ಗ ಅದನ್ನು ಜಾರಿ ಮಾಡುವ ಯತ್ನ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಹಕ್ಕುಗಳನ್ನು ಪಡೆಯಲು ಯಾವುದೇ ಜಾತಿ, ಜನಾಂಗ ಹಾಗೂ
ಧರ್ಮದ ಬ್ರಾಂಡ್ ಅಗತ್ಯವಿಲ್ಲ. ಇಂದು ಹಕ್ಕುಗಳನ್ನು ‌ಪಡೆಯಲು ದೊಡ್ಡ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ’ ಎಂದು ವಿಷಾದಿಸಿದರು.

ಉಪನ್ಯಾಸ ನೀಡಿದ ಎಸ್.ಎ.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಹರಿಣಾಕ್ಷಿ, ‘ಮನುಷ್ಯತ್ವದ ಮತ್ತೊಂದು ಹೆಸರೇ ಮಾನವ ಹಕ್ಕುಗಳು. ಅರ್ಥಿಕ, ಸಾಮಾಜಿಕ ಹಾಗೂ ವೈಜ್ಞಾನಿಕವಾಗಿ ಏನೆಲ್ಲಾ ಸಾಧನೆ ಮಾಡಬಹುದೋ ಅದನ್ನೆಲ್ಲಾ ಹಕ್ಕುಗಳು ಎನ್ನಬಹುದು’ ಎಂದರು.

ಮಾಜಿ ಶಾಸಕ ದಿ. ಎಂ.ಜೆ. ಅಪ್ಪಾಜಿ, ಕಾರ್ಮಿಕ ಹೋರಾಟಗಾರ ಬಿ.ಶಂಕರಪ್ಪ ಹಾಗೂ ಶ್ರೀನಿವಾಸನ್ ಕುಟುಂಬದ ಸದಸ್ಯರನ್ನು
ಗೌರವಿಸಲಾಯಿತು.

ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ, ಆರ್.ಕರುಣಾಮೂರ್ತಿ, ಎಂ.ಎ. ಅಜಿತ್, ಕರಿಯಪ್ಪ, ಎಸ್. ಮಣಿಶೇಖರ್, ಬದರಿನಾರಾಯಣ, ಮಂಜುನಾಥ, ಚಂದ್ರಶೇಖರ್, ಆಶಾ, ಮಿಥಿಲ, ಶಾರದಮ್ಮ, ಜ್ಯೋತಿ, ವಿಶಾಲಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.