ಶಿವಮೊಗ್ಗ: ‘ಇಂಟರ್ನೆಟ್ ವ್ಯಸನದಿಂದ ಹೊರಬಂದು ಆರೋಗ್ಯಕರ ಜೀವನ ಶೈಲಿ ಮರಳಿ ಪಡೆಯಲು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಇಂಟರ್ನೆಟ್ ಡಿ-ಅಡಿಕ್ಷನ್ ವಿಭಾಗ ಸ್ಥಾಪಿಸಲಾಗಿದೆ. ಮೊಬೈಲ್ ಬಳಕೆಯಿಂದ ಸಮಯ ಹಾಗೂ ಆಲೋಚಿಸುವ ಕ್ರಮವನ್ನೇ ಬದಲಿಸಿಕೊಂಡಿದ್ದೇವೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಗೃಹಮಂಡಳಿ ಆಯುಕ್ತ ಕೆ.ಎ.ದಯಾನಂದ ಬೇಸರ ವ್ಯಕ್ತಪಡಿಸಿದರು.
ಸಮನ್ವಯ ಟ್ರಸ್ಟ್ ಹಾಗೂ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು ವತಿಯಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ‘ಭರವಸೆಯ ಹೆಜ್ಜೆ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಡ್ರಗ್ ಹಾಗೂ ಮದ್ಯ ವ್ಯಸನಕ್ಕೆ ಮಾತ್ರ ಡಿ-ಅಡಿಕ್ಷನ್ ವಿಭಾಗಗಳಿವೆ ಎಂದು ಭಾವಿಸಿದರೆ ತಪ್ಪು. ಮೊಬೈಲ್ ಬಳಕೆ ಬಿಡಿಸಲು ಕೂಡ ಬೆಂಗಳೂರಿನಲ್ಲಿ ಒಂದು ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾವಂತರಾದ ನಮಗೆ ತಪ್ಪಿನ ಅರಿವಿದ್ದರೂ ಕೂಡ, ಇದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಭವಿಷ್ಯಕ್ಕಿಂತ ಈ ಕ್ಷಣದ ಸುಖ ಮುಖ್ಯ. ಇದರಿಂದ, ನಾವು ಹುಚ್ಚರು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು’ ಎಂದರು.
‘ಈಗಿನ ಮಕ್ಕಳಿಗಿರುವ ಐಕ್ಯು ಮಟ್ಟ ಹಿರಿಯರಲ್ಲಿ ಕಾಣಲು ಸಾಧ್ಯವಿಲ್ಲ. ಆದರೂ ಈಗಿನವರು ಯಶಸ್ಸು ಸಾಧಿಸಲು ವಿಫಲರಾಗುತ್ತಿದ್ದಾರೆ. ಬುದ್ಧಿವಂತಿಕೆಯನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳುತ್ತೇವೆ ಎನ್ನುವ ಗುರಿಯನ್ನು ಮೊದಲು ಹೊಂದಬೇಕು. ಆಗ ಯಶಸ್ಸು ಸುಲಭವಾಗಿ ಸಿಗುತ್ತದೆ’ ಎಂದರು.
ಮಾಜಿ ಶಾಸಕ ಎಸ್.ರುದ್ರೇಗೌಡ ಮಾತನಾಡಿ, ‘ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದ ದಯಾನಂದ ಅವರು ಜನಸ್ನೇಹಿ ಆಡಳಿತ ನೀಡಿದ್ದರು. ಅವರ ಗುಣ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಭವಿಷ್ಯ ರೂಪಿಸಿಕೊಳ್ಳುವ ಕನಸು ಈ ಕಾರ್ಯಕ್ರಮ ಮೂಲಕ ಸಾಕಾರಗೊಳ್ಳಲಿ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ‘ವ್ಯಕ್ತಿಯ ವಿಕಸನಕ್ಕೆ ಪಿಯುಸಿ ಮುಖ್ಯ ಘಟ್ಟ. ಭವ್ಯ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಅಪಾರ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾಲು ಹೆಚ್ಚಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಇಡಬೇಕು’ ಎಂದು ಹೇಳಿದರು.
ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ ಮಾತನಾಡಿ, ‘ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಮುಂದಿನ ಸಾಲಿನಲ್ಲಿ ನಿಲ್ಲಬೇಕು. ದುಶ್ಚಟಗಳಿಗೆ ಮಾರು ಹೋಗದೆ ಒಳ್ಳೆಯ ದಾರಿಯಲ್ಲಿ ಸಾಗಬೇಕು’ ಎಂದು ಸಲಹೆ ನೀಡಿದರು.
ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಕೆ.ಎಂ.ಗಿರಿಜಾ ದೇವಿ, ನಿರ್ದೇಶಕ ಸಮನ್ವಯ ಕಾಶಿ, ಅಮೃತ್ ನೋನಿ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸ ಮೂರ್ತಿ, ಕಟೀಲು ಅಶೋಕ್ ಪೈ ಸ್ಮಾರಕ ಸಮೂಹ ಸಂಸ್ಥೆಗಳ ನಿರ್ದೇಶಕಿ ಡಾ.ರಜನಿ ಪೈ, ಪ್ರಾಚಾರ್ಯರಾದ ಡಾ.ಸಂಧ್ಯಾ ಕಾವೇರಿ, ಸಾಧನಾ ಅಕಾಡೆಮಿ ಸಂಸ್ಥಾಪಕ ಎಂ.ಬಿ. ಮಂಜುನಾಥ್, ಉದ್ಯಮಿ ಎಸ್.ವಿ.ಮಂಜುನಾಥ್, ಕೃಷಿಕ ದುರ್ಗಪ್ಪ ಅಂಗಡಿ ಇದ್ದರು.
‘ಚಾಟ್ ಜಿಪಿಟಿ ಬಳಸಿಕೊಳ್ಳಿ’
‘ಮೊಬೈಲ್ ಬಳಸುವ ವಿಧಾನ ಬದಲಾಗಬೇಕು. ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ ಜಿಪಿಟಿ ತಂತ್ರಜ್ಞಾನ ಸರಿಯಾಗಿ ಸದ್ಬಳಕೆ ಮಾಡಿಕೊಂಡಿದ್ದೇ ಆದರೆ ಮೊಬೈಲ್‌ನಿಂದ ಅಗಾಧ ಜ್ಞಾನ ಪಡೆಯಬಹುದು’ ಎಂದು ಆಯುಕ್ತ ಕೆ.ಎ.ದಯಾನಂದ ಅಭಿಪ್ರಾಯಪಟ್ಟರು. ಮಾರ್ಗದರ್ಶನ ನೀಡುವ ಗ್ರಂಥಾಲಯ ತಂದೆ–ತಾಯಿಯ ರೂಪಕವಾಗಿ ಮೊಬೈಲ್ ಅನ್ನು ಕಾಣಬೇಕು. ಇಲಾಖೆಯ ಕೆಲವು ಪತ್ರಗಳನ್ನು ಇದರಲ್ಲಿಯೇ ಮುದ್ರಿಸಿ ಪ್ರಿಂಟ್ ಪಡೆಯುತ್ತೇನೆ. ‘ಹಾದಿಗಲ್ಲು ಪುಸ್ತಕ’ವನ್ನು ಪೆನ್ ಪೇಪರ್ ಬಳಸಿ ಬರೆದೇ ಇಲ್ಲ. ಈಗಲೂ ಕೂಡ ಲೇಖನಗಳನ್ನು ಮೊಬೈಲ್‌ನಲ್ಲೇ ಬರೆದು ದಾಖಲಿಸುತ್ತೇನೆ. ಬದುಕಿನಲ್ಲಿ ಗುರಿ ತಲುಪಲು ಮೊಬೈಲ್ ಈ ರೀತಿಯ ಸೇತುವೆಯಾಗಿ ನಿಲ್ಲಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.