ADVERTISEMENT

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ ನಾಳೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 11:52 IST
Last Updated 23 ನವೆಂಬರ್ 2020, 11:52 IST

ಶಿವಮೊಗ್ಗ: ರೋಟರಿ ಕ್ಲಬ್ ವತಿಯಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ನವೆಂಬರ್‌ 25ರಂದು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ರೋಟರಿ ಕ್ಲಬ್‍ನ ಜಿಲ್ಲಾಮಾಜಿ ಗವರ್ನರ್ ಡಾ.ಪಿ. ನಾರಾಯಣ್ ಹೇಳಿದರು.

ಅಂದು ರಾಜರಾಮ್ ಭಟ್‍ ಅವರು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಬಡ ಕುಟುಂಬದ ಮಹಿಳೆಯರಿಗೆ ಹಸುಗಳ ವಿತರಣೆ, ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಯಂತ್ರ ಲೋಕಾರ್ಪಣೆ ಕಾರ್ಯ ನೆರವೇರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

₹ 27.95 ಲಕ್ಷ ವೆಚ್ಚದಲ್ಲಿ 70 ಬಡ ಕುಟುಂಬಗಳ ಮಹಿಳೆಯರಿಗೆ ಮಿಶ್ರ ತಳಿಯ ಅಧಿಕ ಹಾಲು ನೀಡುವ ಹಸುಗಳ ಕೊಡುಗೆ ಹಾಗೂ ಪಶುಪಾಲನೆ ತಜ್ಞರಿಂದ ತರಬೇತಿಯು ಬೆಳಿಗ್ಗೆ 8.30ಕ್ಕೆ ಮತ್ತೂರಿನ ಸುರಭಿಯಲ್ಲಿ ನಡೆಯಲಿದೆ ಎಂದರು.

ADVERTISEMENT

ಬೆಳಿಗ್ಗೆ 10.30ಕ್ಕೆ ಗವರ್ನರ್ ಅವರು ಆಶಾಕಿರಣಕ್ಕೆ ಭೇಟಿ ನೀಡುವರು. 11ಕ್ಕೆ ರಾಷ್ಟ್ರೀಯ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಯ ಉನ್ನತೀಕರಣಕ್ಕಾಗಿ ₹ 29.56 ಲಕ್ಷ ಮೌಲ್ಯದ ಕಂಪ್ಯೂಟರ್, ಅಧುನಿಕ ಪಿಠೋಪಕರಣ ವಿತರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 11.30ಕ್ಕೆ ಉಷಾ ನರ್ಸಿಂಗ್ ಹೋಂನಲ್ಲಿ ಡಾ.ಬಿ. ವೆಂಕಟರಾವ್ ಸ್ಮಾರಕ ರೋಟರಿ ಸ್ತನ ತಪಾಸಣಾ ಕೇಂದ್ರ ಉದ್ಘಾಟಿಸುವರು. ಸಂಜೆ 4ಕ್ಕೆ ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಘಟನೆಯ ಸಹಯೋಗದೊಂದಿಗೆ ವೆಂಕಟೇಶ್ವರ ನಗರದ ಸ್ವೀಟ್ ಪಿಯು ಕಾಲೇಜು ಆವರಣದಲ್ಲಿ ಆಯ್ದ 50 ಮಹಿಳೆಯರಿಗೆ ಒಟ್ಟು 10 ದಿನಗಳ ಕಾಲ ಉದ್ಯೋಗಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದೇ ದಿನ ಸಂಜೆ 4.30ಕ್ಕೆ ಪಂಚಾಕ್ಷರಿ ಗವಾಯಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ಎಚ್.ಎಸ್. ಮೋಹನ್, ಸಿ.ಬಿ. ವೀರಣ್ಣ, ಸುನೀತಾ ಶ್ರೀಧರ್, ಕಿಶೋರ್ ಶಿರ್ನಾಳಿ, ಲಕ್ಷ್ಮೀದೇವಿ ಗೋಪಿನಾಥ್, ವೀರಣ್ಣ ಹುಗ್ಗಿ, ಡಾ.ಉದಯ್, ಎನ್.ಎಸ್. ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.