ADVERTISEMENT

ಕುಟುಂಬ ರಾಜಕಾರಣದಿಂದ ಅಭಿವೃದ್ಧಿ ಕುಂಠಿತ: ಬಾಸೂರು ಚಂದ್ರೇಗೌಡ

ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 7:46 IST
Last Updated 17 ಏಪ್ರಿಲ್ 2023, 7:46 IST
ಟಿಕೆಟ್‌ ಘೋಷಣೆಯಾದ ಕಾರಣ ಸೊರಬದಲ್ಲಿ ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಅವರ ಅಭಿಮಾನಿಗಳು ಸಂಭ್ರಮಿಸಿದರು.
ಟಿಕೆಟ್‌ ಘೋಷಣೆಯಾದ ಕಾರಣ ಸೊರಬದಲ್ಲಿ ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಅವರ ಅಭಿಮಾನಿಗಳು ಸಂಭ್ರಮಿಸಿದರು.   

ಸೊರಬ: 40 ವರ್ಷಗಳ ಕುಟುಂಬ ರಾಜಕಾರಣದಿಂದ ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಂಡಿದ್ದು, ತಾಲ್ಲೂಕಿನ ಮತದಾರರು ಜೆಡಿಎಸ್ ಅಭ್ಯರ್ಥಿಗೆ ಈ ಬಾರಿ ಮತ ಹಾಕುವ ಮೂಲಕ ಹೊಸ ಬದಲಾವಣೆಗೆ ಮುನ್ನುಡಿ ಬರೆಯಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ತಾಲ್ಲೂಕಿನ ಬಾಸೂರು ಗ್ರಾಮದಲ್ಲಿ ಭಾನುವಾರ ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತ ಅವಧಿಯಲ್ಲಿನ ಜನಪರ ಯೋಜನೆಗಳನ್ನು ಹಾಗೂ ಪಂಚರತ್ನ ಕಾರ್ಯಕ್ರಮಗಳನ್ನು ತಾಲ್ಲೂಕಿನಲ್ಲಿ ಸಕಾರಗೊಳಿಸುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ನನ್ನ ಮುಖ್ಯ ಗುರಿ. ತಾಲ್ಲೂಕಿನಾದ್ಯಂತ ರೈತರಿಗೆ ಸಂಬಂಧಿಸಿದಂತೆ ನೂರಾರು ಸಮಸ್ಯೆಗಳಿದ್ದರೂ ಇದುವರೆಗೂ ಯಾವುದೇ ಜನ ಪ್ರತಿನಿಧಿಗಳಿಂದ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ’ ಎಂದು ದೂರಿದರು.

ADVERTISEMENT

‘40 ವರ್ಷಗಳಿಂದ ರೈತರ ಪರವಾಗಿ ಹೋರಾಟ ಮಾಡುತ್ತಾ ಹಲವು ಸಮಾಜಮುಖಿ ಕಾರ್ಯ ಕೈಗೊಂಡಿದ್ದೇನೆ. 1994ರಿಂದ 99 ರವರೆಗೆ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಿದ್ದು ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ದೊರೆತಿರುವುದು ಸಂತಸ ತಂದಿದೆ’ ಎಂದರು.

’ತಾಲ್ಲೂಕಿನಲ್ಲಿ ಜೆಡಿಎಸ್ ಸದೃಢವಾಗಿದ್ದು, ಬದಲಾವಣೆಯ ಪರ್ವ ಆರಂಭವಾಗಿದೆ. ಚುನಾವಣೆಯಲ್ಲಿ ಬಾಸೂರು ಚಂದ್ರೇಗೌಡ ಅವರ ಗೆಲುವು ನಿಶ್ಚಿತ’ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿವಪ್ಪ ದ್ವಾರಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತತ್ತೂರು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಜೀಜ್ ಸಾಬ್, ಶಿವಾಜಪ್ಪ, ಸುನಿಲಕುಮಾರ್ ಮಲ್ಲಾಪುರ, ಸಂಪತ್ ಕುಮಾರ್, ಶಿವಮೂರ್ತಿ ಮನೆಮನೆ, ಮೋನೇಶಗೌಡ ಬೆನ್ನೂರು, ವೀರಭದ್ರಪ್ಪ, ಆನಂದಪ್ಪ, ಚಂದ್ರಪ್ಪ, ಫಕ್ಕೀರಪ್ಪ, ಹಾಲೇಶ್, ಮುಕ್ತಿಯಾರ್ ಅಹಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.