ಹೊಸನಗರ ತಾಲ್ಲೂಕು ಬೆಳಗಿನಮನೆ ಸಮೀಪ ನಿಧಿ ಆಸೆಗಾಗಿ ಗುಂಡಿ ತೋಡಿ ನಿಲುವುಗಲ್ಲಿಗೆ ಹಾನಿ ಮಾಡಿರುವುದು
ಹೊಸನಗರ: ತಾಲ್ಲೂಕಿನ ಬಿಳಗಿನಮನೆ ಸಮೀಪ ನಿಧಿಯ ಆಸೆಗೆ ದುಷ್ಕರ್ಮಿಗಳು ಬೃಹತ್ ನಿಲುವುಗಲ್ಲಿಗೆ ಹಾನಿ ಮಾಡಿದ್ದಾರೆ.
ಭಾನುವಾರ ರಾತ್ರಿ ಕೃತ್ಯ ನಡೆದಿದ್ದು, ಸೋಮವಾರ ಗ್ರಾಮಸ್ಥರಿಗೆ ಪ್ರಕರಣ ನಡೆದಿರುವುದು ಗೊತ್ತಾಗಿದೆ.
ಸುಮಾರು 7 ಅಡಿ ಎತ್ತರದ ಬೃಹತ್ ಗಾತ್ರದ ನಿಲುವುಗಲ್ಲನ್ನು ಕಿತ್ತಿರುವ ದುಷ್ಕರ್ಮಿಗಳು ಅದರ ಬುಡದಲ್ಲಿ ಗುಂಡಿ ತೋಡಿದ್ದಾರೆ. ಅದರ ಪಕ್ಕದಲ್ಲಿ ಕಲ್ಲು ಒಡೆಯುವ ಸಾಧನ, ಮದ್ಯದ ಪಾಕೆಟ್, ಲಿಂಬೆ ಹಣ್ಣು, ಅರಿಶಿನ– ಕುಂಕುಮ ಕಂಡುಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚಕ್ರಾನಗರಕ್ಕೆ ಸಾಗುವ ರಸ್ತೆ ಮಾರ್ಗದ ಪಕ್ಕದಲ್ಲೇ ಈ ಕೃತ್ಯ ಎಸಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ತಾಲ್ಲೂಕಿನ ನಗರ ಸುತ್ತಮುತ್ತ ಬಿದನೂರು ವ್ಯಾಪ್ತಿ ಪ್ರದೇಶದಲ್ಲಿ ನಿಧಿಗಾಗಿ ಆಗಾಗ ಕಳ್ಳರು ಶೋಧ ನಡೆಸುವುದು ಸಾಮಾನ್ಯವಾಗಿದೆ. ಪೊಲೀಸ್ ಇಲಾಖೆ ನಿಧಿ ಶೋಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಶೀಘ್ರ ದುಷ್ಕರ್ಮಿಗಳನ್ನು ಪತ್ತೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಮೇಶ ಹಲಸಿನಹಳ್ಳಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸತೀಶ ಪಟೇಲ್ ಆಗ್ರಹಿಸಿದ್ದಾರೆ.
ಪಿಎಸ್ಐ ಶಿವಾನಂದ ಕೋಳಿ, ಎಎಸ್ಐ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.