ADVERTISEMENT

ಶಿವಮೊಗ್ಗ: ನಾಳೆಯಿಂದ ಮೂರು ದಿನ ಜಿಲ್ಲಾ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 13:41 IST
Last Updated 29 ಜನವರಿ 2021, 13:41 IST

ಶಿವಮೊಗ್ಗ: ಗೋಪಿಶೆಟ್ಟಿ ಕೊಪ್ಪದ ಸಾಹಿತ್ಯ ಭವನದಲ್ಲಿ ಜ.31ರಿಂದ ಫೆ.2ರವರೆಗೆ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ. ಶಂಕರಪ್ಪ ಹೇಳಿದರು.

31ರಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ಇರುತ್ತದೆ. ಬೆಳಿಗ್ಗೆ 9ಕ್ಕೆ ಗೋಪಾಳದ ಬಸ್‌ನಿಲ್ದಾಣದ ಬಳಿ ಇರುವ ದೇವಸ್ಥಾನದಿಂದ ಸಾಹಿತ್ಯ ಭವನದವರೆಗೆ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಜಯಾದೇವಿ ಆಯ್ಕೆಯಾಗಿದ್ದಾರೆ. ಬೆಳಿಗ್ಗೆ 10.30ಕ್ಕೆ ಡಾ.ಬಿ.ವಿ.ವಸಂತ ಕುಮಾರ್ ಸಮ್ಮೇಳನ ಉದ್ಘಾಟಿಸುವರು. ಸಾಹಿತ್ಯ ಭವನಕ್ಕೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಹೆಸರಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅನಾವರಣಗೊಳಿಸುವರು. ಜಿ.ಎಸ್. ಶಿವರುದ್ರಪ್ಪ ಅವರ ವರ್ಣಚಿತ್ರವನ್ನು ಸಂಸದ ಬಿ.ವೈ.ರಾಘವೇಂದ್ರ ಬಿಡುಗಡೆ ಮಾಡುವರು ಎಂದು ಮಾಹಿತಿ ನೀಡಿದರು.

ADVERTISEMENT

ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ವಿವಿಧ ನಿಗಮಗಳ ಅಧ್ಯಕ್ಷರು, ಪಾಲಿಕೆ ಮೇಯರ್, ವಿರೋಧ ಪಕ್ಷದ ನಾಯಕರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿ ಗಣ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು ಎಂದರು.

ಮೂರು ದಿನಗಳ ಕಾರ್ಯಕ್ರಮದಲ್ಲಿ 11 ಗೋಷ್ಠಿಗಳು ನಡೆಯಲಿವೆ. ಸಮ್ಮೇಳನದ ಸರ್ವಾಧ್ಯಕ್ಷರ ಬದುಕ ಬರಹ, ಕನ್ನಡ ಸಾಹಿತ್ಯ ಪರಂಪರೆ, ಸಮ್ಮೇಳನಾಧ್ಯಕ್ಷರ ಜತೆ ಸಂವಾದ, ಜಿಲ್ಲೆಯ ತೆರೆಮರೆಯ ಹಿರಿಯ ಕೃತಿಕಾರರ ಕೃತಿ ದರ್ಶನ, ತುಂಗಾ ಹರಿವಿನಲ್ಲಿ ನೆಲೆಯೂರುತ್ತಿರುವ ಕೃತಿಕಾರರು, ಕೊರೊನಾ ತಂದ ಆತಂಕ, ‘ನಮ್ಮ ಜಿಲ್ಲೆ ನಮ್ಮ ಹೆಮ್ಮೆ’ ವಿಷಯಗಳ ಮೇಲೆ ಗೋಷ್ಠಿಗಳು ನಡೆಯಲಿವೆ. ಕಥಾ ಮತ್ತು ಕವಿತೆ ಸ್ಪರ್ಧೆ ವಿಜೇತರಿಗೆ ಗೌರವಾರ್ಪಣೆ, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾಿಸಲಾಗುವುದು ಎಂದು ವಿವರಿಸಿದರು.

ಫೆ.2ರಂದು ಸಮಾರೋಪ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಶ್ರೀಕಂಠ ಕೂಡಿಗೆ ಸೇರಿ 6 ಜನ ಸಾಹಿತಿಗಳು ಸಮಾರೋಪ ನುಡಿಗಳನ್ನಾಡುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಎನ್.ಸುಂದರರಾಜ್, ರುದ್ರಮುನಿ ಸಜ್ಜನ್, ಗೋಪಜ್ಜಿ ನಾಗಪ್ಪ, ಕೆ.ಬಸವನಗೌಡ, ಮಧುಗಣಪತಿ ರಾವ್, ಹಸನ್‍ ಬೆಳ್ಳಿಗನೂಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.