ಶಿಕಾರಿಪುರ: ಸಹಕಾರ ಸಂಘದ ಸದಸ್ಯರು ತಾವು ಪಡೆದ ಸಾಲದ ಉದ್ದೇಶಕ್ಕೆ ಬಳಕೆ ಮಾಡಿದರೆ ಮರುಪಾವತಿ ಕಷ್ಟವಾಗುವುದಿಲ್ಲ. ಜೊತೆಗೆ ಸಂಘದ ಅಭಿವೃದ್ಧಿಯೂ ಆಗುತ್ತದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್. ಬಸವರಾಜ್ ಹೇಳಿದರು.
ಪಟ್ಟಣದ ಜಗದ್ಗುರು ಪಂಚಾಚಾರ್ಯ ವಿವಿದೋದ್ದೇಶ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ, ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಲ ಪಡೆದ ಉದ್ದೇಶಕ್ಕೆ ಹಣ ಬಳಕೆ ಮಾಡಿಕೊಳ್ಳದಿದ್ದರೆ ಮರುಪಾವತಿ ಕಷ್ಟ, ಆಡಂಬರದ ಜೀವನ ನಿರ್ವಹಣೆಗೆ ಅಗತ್ಯವಿರುವ ಆಧುನಿಕ ಪರಿಕರ ಪಡೆಯುವುದಕ್ಕೆ ಸಾಲದ ಮೊರೆ ಹೋಗಬಾರದು. ಆಗಲೂ ಮರುಪಾವತಿ ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಸಂಘದ ಸದಸ್ಯರಿಗೆ ಶೇ 11ರಷ್ಟು ಡಿವಿಡೆಂಟ್ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಹಕಾರ ಸಂಘ ಆರಂಭಗೊಂಡ 13 ವರ್ಷದಲ್ಲಿ ಸ್ವಂತ ಕಟ್ಟಡ ಹೊಂದಿದ್ದು, ಅದಕ್ಕೆ ಷೇರುದಾರರು ನಮ್ಮ ಸಂಘದಲ್ಲಿ ವ್ಯವಹರಿಸುವ ಗ್ರಾಹಕರು ಕಾರಣವಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಂಘದಲ್ಲಿ ಒಟ್ಟು ₹ 4.65 ಕೋಟಿ ಠೇವಣಿ ಇದ್ದು, ₹ 5.18 ಕೋಟಿ ವಿವಿಧ ಬಗೆಯ ಸಾಲವನ್ನು ಸದಸ್ಯರಿಗೆ ನೀಡಲಾಗಿದೆ. ಕಡಿಮೆ ಬಡ್ಡಿಯಲ್ಲಿ ಸದಸ್ಯರಿಗೆ ಸಾಲ ನೀಡುತ್ತಿದ್ದು ಅದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಡಿಸಿಸಿ ಬ್ಯಾಂಕ್ ಸದಸ್ಯ ಚಂದ್ರಶೇಖರಗೌಡ, ಪುರಸಭೆ ಸದಸ್ಯ ರೇಖಾಬಾಯಿ, ಸಂಘದ ನಿರ್ದೇಶಕ ಪಂಚಾಕ್ಷರಯ್ಯ, ಜಯದೇವಯ್ಯ, ಉಮೇಶ, ಎಸ್.ಜಿ. ಮಹೇಶ್, ಶಾಂತಮ್ಮ, ಗೀತಾ ಚನ್ನಯ್ಯ, ವಾಗೀಶ್‌ಸ್ವಾಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್‌ಕುಮಾರ್, ಸಂಘದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.