ADVERTISEMENT

ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಮೋದಿಗೆ ಏನೂ ಅನ್ನಿಸುವುದಿಲ್ಲವೇ?: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:26 IST
Last Updated 25 ಏಪ್ರಿಲ್ 2024, 15:26 IST
ಶಿಕಾರಿಪುರ ತಾಲ್ಲೂಕಿನ ಹಿತ್ತಲ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಅಂಜನಾಪುರ ಹೋಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಮಾತನಾಡಿದರು
ಶಿಕಾರಿಪುರ ತಾಲ್ಲೂಕಿನ ಹಿತ್ತಲ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಅಂಜನಾಪುರ ಹೋಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಮಾತನಾಡಿದರು   

ಹಿತ್ತಲ (ಶಿಕಾರಿಪುರ): ‘ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರ ಕುಟುಂಬ ರಾಜಕಾರಣ ವಿರೋಧಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿಯೇ ಕುಳಿತ ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಏನೂ ಅನ್ನಿಸುವುದಿಲ್ಲವೇ’ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು. 

ತಾಲ್ಲೂಕಿನ ಹಿತ್ತಲ ಗ್ರಾಮದಲ್ಲಿ ಗುರುವಾರ ರಾಷ್ಟ್ರ ಭಕ್ತರ ಬಳಗ ಆಯೋಜಿಸಿದ್ದ ಅಂಜನಾಪುರ ಹೋಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 

‘ಬಿಜೆಪಿ ಅಪ್ಪ, ಮಕ್ಕಳ ಕೈಯಲ್ಲಿ ಇದೆ. ಅದು ಬಿಜೆಪಿ ನಿಷ್ಠಾವಂತರ ಕೈಯಲ್ಲಿ ಬರಬೇಕು. ಬಿಜೆಪಿಯಲ್ಲಿರುವ ಯಡಿಯೂರಪ್ಪ ಕುಟುಂಬ ರಾಜಕಾರಣವನ್ನು ಶುದ್ಧೀಕರಣ ಮಾಡಲು ನನಗೆ ಮತ ನೀಡಿ ಗೆಲ್ಲಿಸಬೇಕು. ಒಂದು ಕಾಲದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಯಡಿಯೂರಪ್ಪಗೆ ಚುನಾವಣೆ ಖರ್ಚಿಗೆ ತಾಲ್ಲೂಕಿನ ಜನತೆಯೇ ದುಡ್ಡೂ ಕೊಟ್ಟು ಮತ ನೀಡಿ ಗೆಲ್ಲಿಸುತ್ತಿದ್ದರು. ಈಗ ತಾಲ್ಲೂಕಿನ ಜನತೆಗೆ ದುಡ್ಡು ಸುರಿದು ಮಕ್ಕಳನ್ನು ಗೆಲ್ಲಿಸುವ ಕಾಲ ಯಡಿಯೂರಪ್ಪಗೆ ಬಂದಿದೆ. ಚುನಾವಣೆಯಲ್ಲಿ ದುಡ್ಡು ಗೆಲ್ಲುತ್ತೋ, ಧರ್ಮ ಗೆಲ್ಲುತ್ತೋ ನೋಡಿ ಬಿಡೋಣ’ ಎಂದು ಅವರು ಸವಾಲು ಹಾಕಿದರು.

ADVERTISEMENT

‘ಬಿಜೆಪಿಯಲ್ಲಿ ಹಿಂದೂ ನಾಯಕರನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಕ್ಕಳ ರಾಜಕಾರಣಕ್ಕೆ ಅಡ್ಡ ಬರಬಾರದು ಎಂಬ ಉದ್ದೇಶದಿಂದ ಹಿಂದುತ್ವವಾದಿಗಳಾದ ಸಿ.ಟಿ. ರವಿ, ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆ ಅವರಿಗೆ ಈ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲಾಗಿದೆ. ಬಿಜೆಪಿ ನೊಂದ ಕಾರ್ಯಕರ್ತರ ಧ್ವನಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

ರಾಷ್ಟ್ರ ಭಕ್ತ ಬಳಗದ ಮುಖಂಡರಾದ ಈಸೂರು ಸಂತೋಷ್, ರಾಗಿಕೊಪ್ಪ ಗಂಗ್ಯಾನಾಯ್ಕ, ವಕೀಲ ಶಿವಪ್ಪ, ಮಹೇಶ್, ಸಾಸರವಳ್ಳಿ ದುರ್ಗಪ್ಪ ಅಂಗಡಿ, ರಂಗನಾಥ್, ಚೌಡಪ್ಪ, ಉಮೇಶ್, ಮಂಜಪ್ಪ, ಭರ್ಮಪ್ಪ, ಸೀತಾ ಲಕ್ಷ್ಮಿ, ಜಯಲಕ್ಷ್ಮಿ, ರಾಧಾ ರಾಮಚಂದ್ರ, ಆಶಾ ಚನ್ನಬಸಪ್ಪ, ಮುರುಗೇಶ್, ಮೋಹನ, ರಾಜು, ಹುಚ್ಚರಾಯಪ್ಪ, ಮಂಜ್ಯಾನಾಯ್ಕ, ಕುಮಾರ ನಾಯ್ಕ, ಗೊಗ್ಗ ಅನಿಲ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.