ADVERTISEMENT

ಸರ್ಕಾರಿ ಆಸ್ಪತ್ರೆ: ಅಸಡ್ಡೆ ಬೇಡ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಆರೋಗ್ಯ ಮೇಳ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 4:52 IST
Last Updated 27 ಏಪ್ರಿಲ್ 2022, 4:52 IST
ತೀರ್ಥಹಳ್ಳಿ ತಾಲ್ಲೂಕು ಜೆ.ಸಿ. ಆಸ್ಪತ್ರೆ ಆವರಣದಲ್ಲಿ ನಡೆದ ಆರೋಗ್ಯ ಮೇಳವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ವೀಕ್ಷಿಸಿದರು.
ತೀರ್ಥಹಳ್ಳಿ ತಾಲ್ಲೂಕು ಜೆ.ಸಿ. ಆಸ್ಪತ್ರೆ ಆವರಣದಲ್ಲಿ ನಡೆದ ಆರೋಗ್ಯ ಮೇಳವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ವೀಕ್ಷಿಸಿದರು.   

ತೀರ್ಥಹಳ್ಳಿ: ಸರ್ಕಾರಿ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ಬಗೆಯ ಚಿಕಿತ್ಸೆಗಳು ಲಭ್ಯ ಇವೆ. ಶ್ರೀಮಂತಿಕೆ ತೋರಿಕೆ ಉದ್ದೇಶದಿಂದ ಖಾಸಗಿ ಕ್ಲಿನಿಕ್‌ ಬಳಕೆ ಸಲ್ಲದು. ಇದರಿಂದಾಗಿ ಬಡವರ್ಗದ ಜನರನ್ನು ಕಷ್ಟಕ್ಕೆ ತಳ್ಳಿದಂತಾಗುತ್ತದೆ. ಆದಷ್ಟು ಸರ್ಕಾರಿ ಆರೋಗ್ಯ ಸೇವೆ ಪಡೆಯುವುದು ಉತ್ತಮ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಲಹೆ ನೀಡಿದರು.

ಪಟ್ಟಣದ ಜೆ.ಸಿ. ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದಲ್ಲಿ ಹಿಂದಿನ ಅವಧಿಯಲ್ಲಿ ಜನಸಾಮಾನ್ಯರ ಕುರಿತು ಯೋಚಿಸದಂತಹ ಪ್ರಧಾನಿಗಳು ಇದ್ದರು. ನರೇಂದ್ರ ಮೋದಿ ಬಂದ ನಂತರ ಸುಸಜ್ಜಿತ ಶಾಲೆ, ಆಸ್ಪತ್ರೆ ನೀಡುವ ಮೂಲಕ ಸಾರ್ವಜನಿಕ ಸೇವೆಗೆ ಶಕ್ತಿ ನೀಡಿದ್ದಾರೆ. ಆಯುಷ್ಮಾನ್‌ ಆರೋಗ್ಯ ಸೇವೆಯಿಂದ ಬಸ್‌ ಟಿಕೆಟ್‌ ಭತ್ಯೆಯನ್ನೂ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಜನಪರ ಕಾಳಜಿಗೆ ಇದು ಉದಾಹರಣೆ ಎಂದು ತಿಳಿಸಿದರು.

ADVERTISEMENT

‘ಜನರ ಸೇವೆಗಾಗಿ ನೀಡಲಾಗಿರುವ ಔಷಧಗಳು ಉಪಯೋಗವಾಗದೆ ಗೋಡೌನ್‌ ಸೇರುತ್ತಿವೆ. ಹಿಂದೆ ಶಾಸಕನಾಗಿದ್ದಾಗ ಸರ್ಕಾರಿ ಆಸ್ಪತ್ರೆಯಿಂದ 2 ವರ್ಷಕ್ಕೆ ಸಾಲುವಷ್ಟು ಡ್ರೆಸಿಂಗ್‌ ಕ್ಲಾತ್‌ ತಾಲ್ಲೂಕು ಆಸ್ಪತ್ರೆಗೆ ತಂದಿದ್ದೆ. ಹಾಳಾಗುವ ಬದಲು ಉಪಯೋಗವಾಗುವಂತೆ ಯೋಜನೆ ರೂಪಿಸಬೇಕು. ಅದಕ್ಕೆ ಇಚ್ಛಾಶಕ್ತಿ ಇದ್ದರೆ ಸಾಕಾಗುತ್ತದೆ. ಪ್ರಸ್ತುತ ಜೆಸಿ ಆಸ್ಪತ್ರೆ ಅನೇಕ ಆರೋಗ್ಯ ಸೌಲಭ್ಯ ನೀಡುತ್ತಿದೆ’ ಎಂದರು.

ಆರೋಗ್ಯ ಮೇಳದಲ್ಲಿ 300ಕ್ಕೂ ಹೆಚ್ಚು ನಾಗರಿಕರು ಆರೋಗ್ಯ ತಪಾಸಣೆ ಮಾಡಿಕೊಂಡರು. ಬಿಪಿ, ಮಧುಮೇಹ, ಕಣ್ಣು, ಜ್ವರ, ನೆಗಡಿ, ರಕ್ತ ಪರೀಕ್ಷೆಯಂತಹ ಸಾಮಾನ್ಯ ತಪಾಸಣೆ ಜೊತೆಗೆ ಹೆಚ್ಚಿನ ಚಿಕಿತ್ಸೆಯ ಮಾಹಿತಿ ಪಡೆದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ತಹಶೀಲ್ದಾರ್‌ ಡಾ. ಶ್ರೀಪಾದ್‌, ತಾಲ್ಲೂಕು ವೈದ್ಯಾಧಿಕಾರಿ ನಟರಾಜ್‌, ಆಸ್ಪತ್ರೆ ವೈದ್ಯಾಧಿಕಾರಿ ಗಣೇಶ್‌ ಭಟ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್‌, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಪ್ರವೀಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.