
ಶಿವಮೊಗ್ಗ: ‘ಜಿಲ್ಲೆಯಲ್ಲಿ ಗಾಂಜಾ (ಡ್ರಗ್ಸ್) ದಂಧೆ, ಓಸಿ (ಅಂದರ್ ಬಾಹರ್) ಹಾಗೂ ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿ, ಮನೆ ಮನೆಗಳಲ್ಲೂ ಭಾರಿ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿ ಬಂದಿವೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ಕೆ. ನಾಗಲಕ್ಷ್ಮೀ ಚೌಧರಿ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ರಾಜ್ಯ ಮಹಿಳಾ ಆಯೋಗದಿಂದ ಮಂಗಳವಾರ ಮಹಿಳಾ ಸ್ಪಂದನ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಅಕ್ರಮಗಳಿಗೆ ದೊಡ್ಡ ಮಟ್ಟದಲ್ಲಿ ಕಡಿವಾಣ ಹಾಕುವಂತೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಸೂಚನೆ ನೀಡಿದರು.
‘ಶಿವಮೊಗ್ಗದಲ್ಲಿ ಗಾಡಿಗಳ (ಬೈಕ್) ಮೇಲೆ ಬಂದು ಗಾಂಜಾ ಮಾರಾಟ ಮಾಡಿ ಹೋಗುತ್ತಾರೆ. ಗಾಂಜಾ ಕೊಳ್ಳುವವರಲ್ಲಿ ಶಾಲಾ ವಿದ್ಯಾರ್ಥಿಗಳು ಹೊರತಾಗಿಲ್ಲ. ಓಸಿ ಅಂದರೆ ನಂಬರ್ ಆಡುವ ದಂಧೆಯ ಜೊತೆಗೆ ಅಬಕಾರಿ ಇಲಾಖೆಯ ನಿಗದಿತ ಮಾರಾಟ ಗುರಿ ಮುಟ್ಟಬೇಕು ಎಂಬ ಕಾರಣಕ್ಕೆ ಹಳ್ಳಿ ಹಳ್ಳಿಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಾಡಲಾಗುತ್ತಿದೆ’ ಎಂಬುದನ್ನು ನಾಗಲಕ್ಷ್ಮೀ ಚೌಧರಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ‘ಕಾಲಕಾಲಕ್ಕೆ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿ ಗಾಂಜಾ ಮಾರುವವರು ಹಾಗೂ ಕೊಳ್ಳುವವರು ಇಬ್ಬರನ್ನೂ ಪತ್ತೆ ಮಾಡುತ್ತಿದ್ದೇವೆ. ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದರು.
‘ನೀವು (ಪೊಲೀಸರು) ಅಷ್ಟು ಮಾಡಿಯೂ ಅಕ್ರಮ ದಂಧೆ ಇಷ್ಟೇಕೆ ವ್ಯಾಪಕವಾಗಿದೆ. ಅದರಲ್ಲೂ ಗಾಂಜಾ ಮಾರಾಟ, ಓಸಿ ದಂಧೆ ಏಕೆ ಅಷ್ಟೊಂದು ಪ್ರಮಾಣದಲ್ಲಿದೆ’ ಎಂದು ಮರು ಪ್ರಶ್ನಿಸಿದ ನಾಗಲಕ್ಷ್ಮಿ, ‘ಇದಕ್ಕೆ ಕಡಿವಾಣ ಹಾಕಿ. ಶಿವಮೊಗ್ಗದಲ್ಲಿ ಪೊಲೀಸರ ವಿಚಾರದಲ್ಲಿ ಎಲ್ಲವನ್ನೂ ಪಾಸಿಟಿವ್ ಆಗಿ ಹೇಳಲು ಆಗೊಲ್ಲ. ನೆಗೆಟಿವ್ ಹೇಳಲೇಬೇಕಿದೆ. ಖಂಡಿತವಾಗಿಯೂ ಇದಕ್ಕೆ ಕಡಿವಾಣ ಹಾಕಲೇಬೇಕು’ ಎಂದು ಹೇಳಿದರು.
‘ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಸೋಮವಾರದಿಂದ ವಾಸ್ತವ್ಯ ಹೂಡಿದ್ದೇನೆ. ಜಿಲ್ಲೆಯ ಎಲ್ಲ ಭಾಗಗಳಿಂದಲೂ ಮಹಿಳೆಯರು ಬಂದು ನನನ್ನು ಭೇಟಿ ಮಾಡುತ್ತಿದ್ದಾರೆ. ಎಲ್ಲರೂ ಹೇಳುವುದು ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಬಹಳ ದೊಡ್ಡಮಟ್ಟದಲ್ಲಿ ಇದೆ. ಮಕ್ಕಳು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಹಳ್ಳಿಗಳಲ್ಲಿ ವಿಪರೀತ ಚಿಲ್ಲರೆ ಮದ್ಯ ಮಾರಾಟ ಆಗುತ್ತಿದೆ. ಮೊದಲು ಮದ್ಯ ಕುಡಿಯಲು ಊರಿನಿಂದ ಆಚೆಗೆ ಹೋಗಬೇಕಿತ್ತು. ಈಗ ಮನೆಯ ಬಳಿಯೇ ಸಿಗುತ್ತಿದೆ ಎಂದು ತಾಯಂದಿರು ಹೇಳಿದ್ದಾರೆ. ಅದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ’ ಎಂದು ನಾಗಲಕ್ಷ್ಮೀ ಚೌಧರಿ ಎಸ್ಪಿ ಅವರಿಗೆ ಹೇಳಿದರು.
‘ಗೆಳೆಯರ ಜೊತೆ ಮದುವೆಗೆ ಹೋಗಿದ್ದ 9ನೇ ತರಗತಿ ಹುಡುಗ ಅಲ್ಲಿ ಅವರೊಂದಿಗೆ ಮದ್ಯ ಸೇವಿಸಿದ್ದು, ಅದು ಅಪ್ಪ–ಅಮ್ಮನಿಗೆ ಗೊತ್ತಾಗುತ್ತದೆ ಎಂದು ಹೆದರಿ ಕಳೆದ ವಾರ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಲಭವಾಗಿ ಸಿಗುವ ಮದ್ಯ ಕುಡಿದು ಮನೆಗೆ ಬಂದು ಹೆಂಡತಿ, ತಾಯಿಯನ್ನು ಹೊಡೆಯುವ ಕೆಲಸ ಆಗುತ್ತಿದೆ. ನಾನೂ ಒಬ್ಬ ತಾಯಿ ಆಗಿ ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳುವುದು ಇವತ್ತು ಬಹಳ ಮುಖ್ಯ’ ಎಂದು ಹೇಳಿದ ನಾಗಲಕ್ಷ್ಮಿ ಚೌಧರಿ, ‘ಮನೆ, ಪೆಟ್ಟಿಗೆ ಅಂಗಡಿಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಾಡುತ್ತಿದ್ದರೆ, ಗಾಂಜಾ ಮಾರಾಟ, ಓಸಿ ದಂಧೆ ನಡೆಯುತ್ತಿದ್ದರೆ ಅದಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ಯಾವುದೇ ಮುಲಾಜು ಇಲ್ಲದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಶಿವಮೊಗ್ಗದಲ್ಲಿ ಅಕ್ರಮ ಚಟುವಟಿಕೆಗಳು ಸಂಪೂರ್ಣ ನಿವಾರಣೆ ಆಗುವಂತೆ ಕ್ರಮ ವಹಿಸಿ’ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಇಒ ಎನ್.ಹೇಮಂತ್, ಆಯೋಗದ ಕಾರ್ಯದರ್ಶಿ ರೂಪಾ, ಸಿಇಒ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಪಾಲ್ಗೊಂಡಿದ್ದರು.
ಮಸಾಜ್ ಪಾರ್ಲರ್ ಹೆಚ್ಚಳ; ದೂರು ಶಿವಮೊಗ್ಗದಲ್ಲಿ ಮಸಾಜ್ ಪಾರ್ಲರ್‌ಗಳು ಜಾಸ್ತಿ ಇವೆ. ಅದು ಅಗತ್ಯಕ್ಕಿಂತ ಜಾಸ್ತಿ ಆಗಿವೆ. ಆ ಬಗ್ಗೆಯೂ ದೂರುಗಳು ಬಂದಿವೆ ಎಂಬುದನ್ನು ಡಾ.ನಾಗಲಕ್ಷ್ಮಿ ಚೌಧರಿ ಸಭೆಯಲ್ಲಿ ಪ್ರಸ್ತಾಪಿಸಿದರು. ಮಸಾಜ್ ಪಾರ್ಲರ್‌ಗಳಲ್ಲಿ ಕಾನೂನು ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರು ಬಂದಾಗ ದಾಳಿ ಮಾಡಿ ಕ್ರಮ ಕೈಗೊಂಡಿದ್ದೇವೆ ಎಂದು ಎಸ್ಪಿ ಅದಕ್ಕೆ ಪ್ರತಿಕ್ರಿಯಿಸಿದರು. ಹೆಣ್ಣುಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೈಗೊಂಡಿರುವ ಸಮರ್ಥ ಸೇತು ಕಾರ್ಯಕ್ರಮ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಚನ್ನಮ್ಮ ಪಡೆ ಆರಂಭಿಸಿರುವ ಬಗ್ಗೆ ನಾಗಲಕ್ಷ್ಮಿ ಚೌಧರಿ ಶ್ಲಾಘನೆ ವ್ಯಕ್ತಪಡಿಸಿದರು.
- ಪೊಲೀಸರು ರಕ್ಷಣೆ ಕೊಡುತ್ತಿಲ್ಲ: ನಾಗಲಕ್ಷ್ಮಿ ಎದುರು ಅಳಲು
10 ಬಾರಿ ಠಾಣೆಗೆ ಹೋದರೂ ರಕ್ಷಣೆ ಸಿಗುತ್ತಿಲ್ಲ. ಪೊಲೀಸರು ಎಫ್‌ಐಆರ್ ಮಾಡಿಲ್ಲ ಎಂದು ಕೌಟುಂಬಿಕ ದೌರ್ಜನ್ಯ ಹಾಗೂ ಆಸಿಡ್ ದಾಳಿಗೊಳಗಾದ ಮಹಿಳೆಯೊಬ್ಬರು ದೊಡ್ಡಪೇಟೆ ಠಾಣೆ ಪೊಲೀಸರ ವಿರುದ್ಧ ಡಾ.ನಾಗಲಕ್ಷ್ಮಿ ಚೌಧರಿ ಎದುರು ಅಲವತ್ತುಕೊಂಡರು. ‘ಸೈಬರ್ ವಂಚನೆಯಲ್ಲಿ ಜಮೀನು ಮಾರಿದ್ದ ₹54 ಲಕ್ಷ ಕಳೆದುಕೊಂಡು ಒಂದು ವರ್ಷ ಆಗಿದೆ. ಆರೋಪಿಗಳ ನೆಲೆ ಪತ್ತೆಯಾಗಿದ್ದರೂ ಶಿವಮೊಗ್ಗದ ಸಿಇಎನ್ ಠಾಣೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬಾಗಲಕೋಟೆಯಿಂದ ಬಂದಿದ್ದ ಮಹಿಳೆಯೊಬ್ಬರು ರೋಧಿಸಿದರು. ‘ಮಗಳಿಗೆ ಬ್ಲಾಕ್‌ಮೇಲ್ ಮಾಡಿದ್ದ ಯುವಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೆವು. ಬಂಧನಕ್ಕೊಳಗಾಗಿ ಜೈಲಿಗೆ ಹೋಗಿ ಬಂದಿರುವ ಆತ ಸ್ನೇಹಿತರೊಂದಿಗೆ ಸೇರಿ ನಮ್ಮ ಕುಟುಂಬಕ್ಕೆ ವಿಪರೀತ ತೊಂದರೆ ಕೊಡುತ್ತಿದ್ದಾನೆ. ಮಗಳು ಪದವಿ ಓದಲು ನಿತ್ಯ ಸಾಗರಕ್ಕೆ ಹೋಗಿಬರುತ್ತಿದ್ದಾಳೆ. ಆಕೆಯನ್ನು ಪೀಡಿಸುತ್ತಿದ್ದಾನೆ. ಈಗ ಪೊಲೀಸರಿಗೆ ಹೇಳಿದರೂ ಕ್ರಮ ಆಗುತ್ತಿಲ್ಲ’ ಎಂದು ಆನಂದಪುರದ ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ತೋಟದಲ್ಲಿನ ಅಡಿಕೆ ಕೀಳಲು ಮಕ್ಕಳು ಬಿಡುತ್ತಿಲ್ಲ. ಮರಕ್ಕೆ ಕಟ್ಟಿಹಾಕಿ ಹೊಡೆಯುತ್ತಾರೆ. ದೂರು ಕೊಟ್ಟರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ವೃದ್ಧೆಯೊಬ್ಬರು ಅಳಲು ತೋಡಿಕೊಂಡರು. ಇಲಾಖೆಯಲ್ಲಿರುವ ಪತಿಯೇ ನನಗೆ ತೊಂದರೆ ಕೊಡುತ್ತಿದ್ದಾರೆ. ಅವರಿಂದ ರಕ್ಷಣೆ ಕೊಡಿ ಎಂದು ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಆಯೋಗದ ಅಧ್ಯಕ್ಷರಿಗೆ ದೂರು ನೀಡಿದರು. ‘ನಿಮಗೇ ರಕ್ಷಣೆ ಇಲ್ಲವೇ?’ ಎಂದು ನಾಗಲಕ್ಷ್ಮಿ ಅಚ್ಚರಿ ವ್ಯಕ್ತಪಡಿಸಿದರು. ‘ಸಭೆಯಲ್ಲಿ ಸ್ವತಃ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಎಸ್ಪಿ ಅವರೇ ಇದ್ದಾರೆ. ಸಂಬಂಧಿಸಿದವರಿಗೆ ಸೂಚನೆ ಕೊಟ್ಟು ನಿಮಗೆ ನೆರವಾಗಲಿದ್ದಾರೆ’ ಎಂದು ನಾಗಲಕ್ಷ್ಮಿ ಚೌಧರಿ ಮಹಿಳೆಯರಿಗೆ ಸಾಂತ್ವನ ಹೇಳಿದರು. ಈ ವೇಳೆ 100ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾದವು.
- ಕಾನೂನು ಸೇವಾ ಪ್ರಾಧಿಕಾರದ ಕಾರ್ಯ; ಆಯೋಗ ಶ್ಲಾಘನೆ
ಮಹಿಳೆಯರು ದೌರ್ಜನ್ಯಕ್ಕೊಳಗಾದಾಗ ಅದು ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣವಿರಲಿ ಎಲ್ಲ ಸಂಕಷ್ಟದ ಹೊತ್ತಿನಲ್ಲೂ ಅವರಿಗೆ ನ್ಯಾಯ ಕೊಡಿಸುವಲ್ಲಿ ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರ ನೀಡಿರುವ ನೆರವಿನ ಮಾಹಿತಿ ಕೇಳಿ ಡಾ.ನಾಗಲಕ್ಷ್ಮಿ ಚೌಧರಿ ಸಂತಸ ವ್ಯಕ್ತಪಡಿಸಿದರು. 1990ರಲ್ಲಿ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಬಹುತೇಕ ಪರಿಹಾರದ ಭರವಸೆಯನ್ನೇ ಬಿಟ್ಟಾಗ ಆಕೆಯ ನೆರವಿಗೆ ನಿಂತು 2024ರಲ್ಲಿ ₹7 ಲಕ್ಷ ಪರಿಹಾರ ಹಾಗೂ ಮಾಸಾಶನ ಕೊಡಿಸಿರುವುದು ಅದಕ್ಕೆ ಪೂರಕವಾಗಿ ಕೈಗೊಂಡ ಕಾನೂನು ಪ್ರಕ್ರಿಯೆಗಳ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಸಭೆಗೆ ವಿವರಿಸಿದಾಗ ಚಪ್ಪಾಳೆಯ ಸದ್ದು ಮೊಳಗಿತು. ಶಿವಮೊಗ್ಗದಲ್ಲಿ ಪ್ರಾಧಿಕಾರ ಇಷ್ಟೊಂದು ಜೀವನ್ಮುಖಿಯಾಗಿದೆ ಎಂದು ಶ್ಲಾಘಿಸಿದ ನಾಗಲಕ್ಷ್ಮಿ ಚೌಧರಿ ಪ್ರಾಧಿಕಾರದೊಂದಿಗೆ ಮಹಿಳಾ ಆಯೋಗವೂ ಕೈಜೋಡಿಸಿ ನೊಂದವರಿಗೆ ನ್ಯಾಯ ಕಲ್ಪಿಸಲು ಮುಂದಾಗಲಿದೆ. ತಮ್ಮ ಮಾದರಿ ನಮಗೆ ನೆರವಾಗಲಿದೆ ಎಂದು ಹೇಳಿದರು. ವಿವಾಹ ಆದ ಕೆಲವೇ ದಿನಗಳಲ್ಲಿ ಹೊಂದಾಣಿಕೆ ಕೊರತೆಯಿಂದ ದೂರವಾಗಲು ಮುಂದಾಗುವ ದಂಪತಿಯನ್ನು ಮತ್ತೆ ಒಂದಾಗಿಸಲು ರಾಜ್ಯ ಮಹಿಳಾ ಆಯೋಗದಿಂದ ‘ಕೂಡಿ ಬಾಳೋಣ’ ಹೆಸರಿನ ಕಾರ್ಯಕ್ರಮ ಶೀಘ್ರ ಆರಂಭಿಸಲಾಗುವುದು ಎಂದು ನಾಗಲಕ್ಷ್ಮಿಚೌಧರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.